ಮೈಸೂರು

ಫೆ.23 : ಶ್ರೀ ಎಂ ಅವರಿಂದ ಜೆಎಸ್‍ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವ ದತ್ತಿ ಉಪನ್ಯಾಸ

ಮೈಸೂರು,ಫೆ.20:- ಜೆಎಸ್‍ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವ ದತ್ತಿಯ 10ನೇ ಉಪನ್ಯಾಸವನ್ನು ಫೆಬ್ರವರಿ 23ರಂದು ಬೆಳಗ್ಗೆ 11 ಗಂಟೆಗೆ ಮೈಸೂರಿನ ಸರಸ್ವತಿಪುರಂನ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಆಂಧ್ರ ಪ್ರದೇಶದ ಮದನಪಲ್ಲಿಯ ಸತ್ಸಂಗ್‍ ಫೌಂಡೇಶನ್‍ ನ ಸಂಸ್ಥಾಪಕರಾದ ಶ್ರೀ ಎಂ ಅವರು ‘ಸಾಧನೆ – ವಿಮೋಚನೆಯ ಹಾದಿ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಇವರು ಆಧ್ಯಾತ್ಮಿಕ ಮಾರ್ಗದರ್ಶಕರು, ಸಮಾಜ ಸುಧಾರಕರು ಮತ್ತು ಶಿಕ್ಷಣ ತಜ್ಞರು. ಮುಮ್ತಾಜ್ ಆಲಿ ಖಾನ್ ಇವರ ಪೂರ್ವಾಶ್ರಮದ ಹೆಸರು. 19ನೇ ವಯಸ್ಸಿನಲ್ಲಿ ಹಿಮಾಲಯ ಪರ್ವತಕ್ಕೆ ಹೋಗಿ ಅಲ್ಲಿ ಹಲವಾರು ಸಂತರು ಮತ್ತು ಋಷಿಮುನಿಗಳನ್ನು ಭೇಟಿಯಾದರು. ಮಹೇಶ್ವರನಾಥ ಬಾಬಾಜಿಯವರ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಸಿದ್ಧಿಯನ್ನು ಪಡೆದರು. ಇವರ ಆತ್ಮಚರಿತ್ರೆ ಅಪ್ರೆಂಟಿಸ್ಡ್ ಟು ಎ ಹಿಮಾಲಯನ್ ಮಾಸ್ಟರ್ – ಎ ಯೋಗಿಸ್ ಆಟೋಬಯಾಗ್ರಫಿ ಅತ್ಯಂತ ಜನಪ್ರಿಯ ಕೃತಿ. ಆಧ್ಯಾತ್ಮಿಕ ಕ್ಷೇತ್ರದಲ್ಲಿನ ಶ್ರೇಷ್ಠ ಸೇವೆಗಾಗಿ ಭಾರತ ಸರ್ಕಾರ 2019ರಲ್ಲಿ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲ್ಲೊಂದಾದ ‘ಪದ್ಮಭೂಷಣ’ ಪುರಸ್ಕಾರವನ್ನು ನೀಡಿ ಗೌರವಿಸಿದೆ.
ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ದಿವ್ಯ ಸಾನ್ನಿಧ್ಯ ನೀಡಲಿದ್ದಾರೆ. ಮೈಸೂರಿನ ಮೆರಿಟರ್ ಎಚ್‍ ವಿಎಸ್ ಇಂಡಿಯಾ ಪ್ರೈ. ಲಿ., ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಎನ್. ಮುತ್ತುಕುಮಾರ್‍ ರವರು ಅಧ್ಯಕ್ಷತೆ ವಹಿಸಲಿದ್ದಾರೆ. 7 ಮತ್ತು 9ರ ದತ್ತಿ ಉಪನ್ಯಾಸಗಳಾದ ಡಾ. ಎ.ಎಸ್. ಕಿರಣ್‍ ಕುಮಾರ್‍ ರವರ ‘ಸ್ಪೇಸ್ ಟೆಕ್ನಾಲಜಿ ಅಂಡ್ ಸೊಸೈಟಲ್ ಅಪ್ಲಿಕೇಷನ್ಸ್’ ಹಾಗೂ ಡಾ. ಗೀತಾ ಗೋಪಿನಾಥ್‍ರವರ ‘ಗ್ಲೋಬಲೈಸೇಷನ್: ಚಾಲೆಂಜಸ್ ಅಂಡ್ ದಿ ನೀಡ್ ಫಾರ್ ಕೋ-ಆಪರೇಷನ್’ ಕೃತಿಗಳನ್ನು ಬೆಂಗಳೂರು ಬ್ರೈನ್ಸ್ ನ್ಯೂರೋ ಸ್ಪೈನ್ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷರು ಮತ್ತು ಮುಖ್ಯ ನರಶಸ್ತ್ರ ಚಿಕಿತ್ಸಕರಾದ ಡಾ. ಎನ್.ಕೆ. ವೆಂಕಟರಮಣರವರು ಲೋಕಾರ್ಪಣೆ ಮಾಡಲಿದ್ದಾರೆ.
ಜೆಎಸ್‍ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವದ ನೆನಪಿಗಾಗಿ 2004ರಲ್ಲಿ ದತ್ತಿಯನ್ನು ಸ್ಥಾಪಿಸಲಾಗಿದೆ. ಇದರ ಆಶ್ರಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿರುವ ವ್ಯಕ್ತಿಗಳಿಂದ ಪ್ರಚಲಿತ ಸಾಮಾಜಿಕ ವಿಷಯಗಳನ್ನು ಕುರಿತಂತೆ ವಿಶೇಷ ಉಪನ್ಯಾಸ ಏರ್ಪಡಿಸಲಾಗುತ್ತಿದೆ. ಈ ಮಾಲೆಯ ಹತ್ತನೆಯ ಉಪನ್ಯಾಸವನ್ನು ಈಗ ಏರ್ಪಡಿಸಲಾಗಿದೆ. ಉಪನ್ಯಾಸದ ನಂತರ ಪ್ರಶ್ನೋತ್ತರಕ್ಕೆ ಅವಕಾಶವಿರುತ್ತದೆ.
ಸಾರ್ವಜನಿಕರು ಕಾರ್ಯಕ್ರಮದಲ್ಲಿ ಕೋವಿಡ್-19ರ ಮಾರ್ಗಸೂಚಿಗಳನ್ನು ಅನುಸರಿಸಿ ಭಾಗವಹಿಸಲು ಕೋರಲಾಗಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: