ಮೈಸೂರು

ಉತ್ತಮವಾಗಿ ಕೆಲಸ ಮಾಡುವುದರಿಂದ ಆತ್ಮತೃಪ್ತಿ ದೊರೆಯುತ್ತದೆ : ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಫೆ.22:-  ಉತ್ತಮವಾಗಿ ಕೆಲಸ ಮಾಡುವುದರಿಂದ ಆತ್ಮತೃಪ್ತಿ ದೊರೆಯುತ್ತದೆ. ವಿವಿಯು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು  ಮೈಸೂರು ವಿಶ್ವವಿದ್ಯಾನಿಲಯದ  ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

ಅವರಿಂದು ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗ ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಆಯೋಜಿಸಿದ್ದ “ಪ್ರಚಾರೋಪನ್ಯಾಸ” ಹಾಗೂ ಡಾ.ಆರ್.ಲೋಕೇಶ್ ಅವರ ಸಂಶೋಧನಾ ಕೃತಿ “ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.

ವ್ಯರ್ಥವಾಗಿ ಕಾಲಹರಣ ಮಾಡುವುದನ್ನು ಬಿಟ್ಟು ವಿವಿ ಎಲ್ಲ ಉದ್ಯೋಗಿಗಳು ಸಮರ್ಥವಾಗಿ ತಮ್ಮನ್ನು ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು.  ನನಗೆ ಕೆಲಸ ಮಾಡುವ ಸಿಬ್ಬಂದಿ ಬೇಕು.   ಉತ್ತಮವಾಗಿ ಕೆಲಸ ಮಾಡುವುದರಿಂದ ಆತ್ಮತೃಪ್ತಿ ದೊರೆಯುತ್ತದೆ. ವಿವಿಯು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು. ವಿಶ್ವವಿದ್ಯಾನಿಲಯದ ಎಲ್ಲ ವಿಭಾಗಗಳಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಚುರುಕುಗೊಳಿಸಲು ಹಾಗೂ ಸೌಲಭ್ಯಗಳನ್ನು ಒದಗಿಸಿಕೊಡುವುದರ ಕುರಿತು ಕಾರ್ಯಪ್ರವೃತ್ತರಾಗಿದ್ದೇವೆ. ಎಲ್ಲ ಸಂಶೋಧಕರು ಗಂಭೀರವಾಗಿ ತಮ್ಮ ಸಂಶೋಧನೆಯಲ್ಲಿ ತೊಡಗಿಳ್ಳಿ ಎಂದು ಸಲಹೆ ನೀಡಿದರು.

ಪ್ರಚಾರೋಪನ್ಯಾಸ ಕಾರ್ಯಕ್ರಮವು ಅಪರೂಪ ಕಾರ್ಯಕ್ರಮವಾಗಿದ್ದು, ವಿಶ್ವಮಟ್ಟದಲ್ಲಿ ಮೈಸೂರು ವಿವಿ ಎಕ್ಸಪೀರಿಮೆಂಟ್ ಎಂದು ಪ್ರಸಿದ್ಧಿ ಪಡೆದಿದೆ. ಪ್ರೊ.ಎನ್.ಎಂ.ತಳವಾರ ವರ್ಷದ ಅವಧಿಗೆ 25 ಪ್ರಚಾರೋಪನ್ಯಾಸಗಳಿಗೆ ಮನವಿ ಸಲ್ಲಿಸಿದ್ದರು. ಅವರ ಕ್ರಿಯಾಶೀಲತೆಯ ಮೇಲೆ ಭರವಸೆಯಿಟ್ಟು 25 ಉಪನ್ಯಾಸ ಕಾರ್ಯಕ್ರಮ ನಡೆಸಲು ಆಡಳಿತಾತ್ಮಕ ಮತ್ತು ಹಣಕಾಸಿನ ಅನುಮೋದನೆ ನೀಡಿದೆವು. ಈ ಯೋಜನೆ ಪ್ರಾಯಶಃ ಮುಕ್ಕಾಲುಪಾಲು ಯಶಸ್ವಿಯಾಗಿ ಪೂರೈಸಿದ್ದಾರೆ. ಇನ್ನು ಐದಾರು ಕಾರ್ಯಕ್ರಮ ಬಾಕಿ ಉಳಿದಿರಬಹುದು ಎಂದು ಮೆಚ್ಚುಗೆವ್ಯಕ್ತಪಡಿಸಿದರು.

ಪ್ರಬುದ್ಧ ಕರ್ನಾಟಕ ನಿಯತಕಾಲಿಕೆಯ ಶತಮಾನೋತ್ಸವ, ಪ್ರಬುದ್ಧ ಕರ್ನಾಟಕ ಮತ್ತು ಮಾನವಿಕ ಕರ್ನಾಟಕ ನಿಯತಕಾಲಿಕೆಗಳ ಸುವರ್ಣ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಅವರು ಉತ್ಸುಕರಾಗಿದ್ದಾರೆ. ಅವರು ಸಲ್ಲಿಸಿದ ಕ್ರಿಯಾಯೋಜನೆಗೆ ಈಗಾಗಲೇ, ತಾತ್ವಿಕ ಒಪ್ಪಿಗೆ ನೀಡಿದ್ದೇನೆ ಎಂದು ಹೇಳಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಾಧನೆಗಳಿಂದ ವಿವಿಗೆ ಅಪಾರ ಕೀರ್ತಿ ಬಂದಿದೆ. ಇಲ್ಲಿಯ ವಿಶ್ವಕೋಶ ಎಪಿಗ್ರಾಫಿಯಾ ಕರ್ನಾಟಕ, ಭಾಷಾಂತರ ಮತ್ತು ಗ್ರಂಥಸಂಪಾದನೆ ಯೋಜನೆಗಳು ಯಶಸ್ವಿಯಾಗಿ ನಡೆಯಲಿ. ಕನ್ನಡ ಅಧ್ಯಯನ ಸಂಸ್ಥೆಯ ಎಲ್ಲ ಶೈಕ್ಷಣಿಕ ಚಟುವಟಿಕೆಗಳಿಗೆ ವಿವಿ ಸಂಪೂರ್ಣ ಪ್ರೋತ್ಸಾಹ ನೀಡುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಬಹಳಷ್ಟು ಸಂಶೋಧಕರು ಪಿಎಚ್.ಡಿ.ಪದವಿ ಬಂದ ಮೇಲೆ ವಿಶ್ರಾಂತಿಗೆ ಜಾರುತ್ತಾರೆ. ಸಂಶೋಧನ ಪ್ರಬಂಧವನ್ನು ಪ್ರಕಟಿಸುವ ಗೊಡವೆಗೆ ಹೋಗುವುದಿಲ್ಲ. ಆದರೆ, ಲೋಕೇಶ್ ಅವರು ಹಾಗೇ ವಿಶ್ರಾಂತಿಗೆ ಜಾರದೇ, ತಮ್ಮ ಸಂಶೋಧನ ಮಹಾಪ್ರಬಂಧವನ್ನು ಪ್ರಕಟಣೆ ಮಾಡುವ ಪ್ರಯತ್ನ ಮಾಡಿರುವುದು ಉತ್ತಮ ಕಾರ್ಯ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ.ಆರ್‌.ಶಿವಪ್ಪ , ಬಳ್ಳಾರಿಯ ತೆಕ್ಕಲಕೋಟೆ ಸ.ಪ್ರ.ದ‌.ಕಾಲೇಜು ಸಹ ಪ್ರಾಧ್ಯಾಪಕ ಡಾ.ಮಾನಕರಿ ಶ್ರೀನಿವಾಸಾಚಾರ್ಯ, ಸಂಸ್ಕೃತಿ‌‌ ಚಿಂತಕ ಡಾ.ಚಿನ್ನಸ್ವಾಮಿ ವಡ್ಡಗೆರೆ,  ಕು.ಕ.ಅ.ಸಂಸ್ಥೆ ನಿರ್ದೇಶಕ ಪ್ರೊ‌.ಎಂ.ಬಿ.ಮಂಜುನಾಥ್, ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ಎನ್.ಎಂ‌.ತಳವಾರ ಇತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: