ದೇಶಪ್ರಮುಖ ಸುದ್ದಿ

ಭಾನುವಾರಗಳಂದು ಬಾಗಿಲು ಮುಚ್ಚಲಿವೆ ಪೆಟ್ರೋಲ್ ಬಂಕ್‍ಗಳು

ನವದೆಹಲಿ: ಮೇ 14ರಿಂದ ಪೆಟ್ರೋಲ್, ಡೀಸೆಲ್ ಗ್ರಾಹಕರು ಎಚ್ಚೆತ್ತುಕೊಳ್ಳಬೇಕಿದೆ. ಏಕೆಂದರೆ, ದೇಶದ ಎಂಟು ರಾಜ್ಯಗಳಲ್ಲಿ ಪೆಟ್ರೋಲ್‍ ಬಂಕ್‍ಗಳು ಪ್ರತಿ ಭಾನುವಾರ ವಹಿವಾಟು ಬಂದ್ ಮಾಡಿ ಬಾಗಿಲು ಮುಚ್ಚಿರುತ್ತವೆ.

ತೈಲ ಸಂರಕ್ಷಣೆ ಕಾಳಜಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕರೆಗೆ ಸ್ಪಂದಿಸಿರುವ ಪೆಟ್ರೋಲ್ ಬಂಕ್ ಮಾಲೀಕರು, ಮೇ 14 ರಿಂದ ಭಾನುವಾರದ ರಜೆ ನೀಡಲಿದ್ದಾರೆ.

“ಕೆಲವು ವರ್ಷಗಳ ಹಿಂದೆಯೇ ನಾವು ಈ ಯೋಚನೆಯಲ್ಲಿದ್ದೆವು. ಆಗ ತೈಲ ಕಂಪನಿಗಳ ಮನವಿ ಮೇರೆಗೆ ಭಾನುವಾರಗಳಂದು ರಜೆ ನೀಡುವ ನಿರ್ಧಾರ ಕೈಬಿಟ್ಟಿದ್ದೆವು. ಆದರೆ ಈಗ ಪ್ರತಿ ಭಾನುವಾರ ರಜೆ ನೀಡಲು ಮತ್ತೆ ನಿರ್ಧರಿಸಿದ್ದೇವೆ” ಎಂದು ಇಂಡಿಯನ್ ಪೆಟ್ರೋಲಿಯಂ ಡೀಲರ್ಸ್ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಕುಮಾರ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು “ಮನ್‍ ಕಿ ಬಾತ್” ಕಾರ್ಯಕ್ರಮದಲ್ಲಿ ಕರೆ ನೀಡಿದ ಮೇರೆಗೆ ಒಕ್ಕೂಟವು ಈ ನಿರ್ಧಾರ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ತಮಿಳುನಾಡು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್‍ನ ಉಪಾಧ‍್ಯಕ್ಷರೂ ಆಗಿರುವ ಕುಮಾರ್, “ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ್, ಪಾಂಡಿಚೆರಿ, ತೆಲಂಗಾಣ, ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳಲ್ಲಿ ಮೇ 14 ರಿಂದ ಪ್ರತಿ ಭಾನುವಾರದಂದು ದಿನದ 24 ಗಂಟೆ ಸಂಪೂರ್ಣ ರಜೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

“ಭಾನುವಾರ ರಜೆ ನೀಡುವ ನಿರ್ಧಾರದಿಂದ ತಮಿಳುನಾಡಿನಲ್ಲಿ ಉದ್ಯಮಕ್ಕೆ 150 ಕೋಟಿ ರೂ.ಗಳಷ್ಟು ನಷ್ಟವಾಗಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾನುವಾರಗಳಂದು ಶೇಕಡಾ 40 ರಷ್ಟು ವಹಿವಾಟು ಕುಸಿದಿದೆ ಎಂದೂ ಅವರು ತಿಳಿಸಿದರು.

“ತೈಲ ಮಾರಾಟ ಕಂಪನಿಗಳು ಈ ನಿರ್ಧಾರವನ್ನು ಬೆಂಬಲಿಸಿವೆಯೆ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ನಾವು ಈಗಷ್ಟೇ “ನಿರ್ಧಾರ ಕೈಗೊಂಡಿದ್ದು ಆದಷ್ಟು ಶೀಘ್ರ ಕಂಪನಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು” ಎಂದರು.

ರಜೆ ದಿನ ತುರ್ತು ಸಂದರ್ಭಕ್ಕೆ ಪೂರೈಕೆ :

ಬಂಕ್‍ಗಳಲ್ಲಿ ಸಾಮಾನ್ಯವಾಗಿ ಪ್ರತಿದಿನ 15 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುವರು.  ಆದರೆ ರಜೆ ದಿನ ಒಬ್ಬ ನೌಕರ ಮಾತ್ರ ಬಂಕ್‍ನಲ್ಲಿ ಇರಲಿದ್ದು, ತುರ್ತು ಸಂದರ್ಭ ಒದಗಿ ಬಂದವರಿಗೆ ಇಂಧನ ಪೂರೈಸಲಿದ್ದಾರೆ.

ಬಂಕ್‍ಗಳ ಕಮಿಷನ್ ಕುರಿತು ಮಾತುಕತೆ :

ತೈಲ ಮಾರಾಟ ಕಂಪನಿಗಳು ಬಂಕ್‍ ಮಾಲೀಕರಿಗೆ ನೀಡುವ ಕಮಿಷನ್ ಹೆಚ್ಚಿಸುವ ಕುರಿತು ಮಾತನಾಡಿದ ಸುರೇಶ್, ಅಸೋಸಿಯೇಷನ್ ವತಿಯಿಂದ ಕಂಪನಿಗಳ ಜೊತೆ ಚರ್ಚೆ ನಡೆಯುತ್ತಿದೆ. ಕಮಿಷನ್ ಹೆಚ್ಚಳ ವಿಚಾರ ಕುರಿತಂತೆ ಮಂಡಳಿ ಸದಸ್ಯರ ಸಭೆ ಕರೆದು ಸದ್ಯದಲ್ಲೇ ಅಭಿಪ್ರಾಯ ಆಲಿಸಲಾಗುವುದು. ಆ ನಂತರ ಈ ವಿಚಾರದಲ್ಲಿ ನಮ್ಮ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದರು.

(ಎನ್‍.ಬಿ.ಎನ್‍)

Leave a Reply

comments

Related Articles

error: