ದೇಶಪ್ರಮುಖ ಸುದ್ದಿ

ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣ: ಮೇ 15ಕ್ಕೆ ವಿಚಾರಣೆ

ಠಾಣೆ,ಫೆ.22-ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಮಹಾರಾಷ್ಟ್ರ ನ್ಯಾಯಾಲಯ ಮೇ 15ಕ್ಕೆ ನಿಗದಿ ಮಾಡಿದೆ.

2014ರಲ್ಲಿ ಠಾಣೆಯ ಭಿವಂಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ಮಹಾತ್ಮ ಗಾಂಧೀಜಿ ಅವರ ಹತ್ಯೆಯಲ್ಲಿ ಆರ್‌ಎಸ್‌ಎಸ್‌ ಕೈವಾಡವಿದೆ ಎಂದು ಆರೋಪಿಸಿದ್ದರು.

ಈ ವಿಡಿಯೋದ ಆಧಾರದ ಮೇಲೆ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್‌) ಸ್ಥಳೀಯ ಕಾರ್ಯಕರ್ತ ರಾಜೇಶ್‌ ಕುಂಟೆ ಅವರು ರಾಹುಲ್‌ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. 2018ರಲ್ಲಿ ಅರ್ಜಿ ವಿಚಾರಣೆ ನಡೆಸಿದ ಭಿವಂಡಿಯ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು,’ ರಾಹುಲ್‌ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಯ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿತ್ತು.

ಇದೀಗ ನ್ಯಾಯಾಲಯವು ಈ ಅರ್ಜಿ ಸಂಬಂಧ ಶನಿವಾರ ವಿಚಾರಣೆ ನಡೆಸಿದೆ. ಈ ವೇಳೆ ರಾಹುಲ್‌ ಗಾಂಧಿ ಪರ ವಕೀಲರು ಕೋವಿಡ್‌ ಪ್ರಯಾಣ ನಿರ್ಬಂಧದಿಂದಾಗಿ ರಾಹುಲ್ ಗಾಂಧಿ ಅವರು ಕೋರ್ಟ್‌ಗೆ ಹಾಜರಾಗಲು ಸಾಧ್ಯವಿಲ್ಲ. ಇದರಲ್ಲಿ ನ್ಯಾಯಾಲಯ ವಿನಾಯತಿ ನೀಡಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ನ್ಯಾಯಾಲಯ ಸಮ್ಮತಿ ಸೂಚಿಸಿತ್ತು.

ಮ್ಯಾಜಿಸ್ಟ್ರೇಟ್‌ ಜೆ.ವಿ ಪಲಿವಾಲ್‌ ಅವರು,’ ಈ ಪ್ರಕರಣ ಸಂಬಂಧ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸದಂತೆ ಹೈಕೋರ್ಟ್‌ ತಡೆಯಾಜ್ಞೆ ನೀಡಿಲ್ಲ. ಹಾಗಾಗಿ ಈ ಪ್ರಕರಣ ಸಂಬಂಧ ಮುಂದಿನ ವಿಚಾರಣೆಯನ್ನು ಮೇ 15 ರಂದು ನಡೆಸಲಾಗುವುದು. ಈ ವೇಳೆ ಅರ್ಜಿದಾರರ ಹೇಳಿಕೆಯನ್ನು ದಾಖಲಿಸಲಾಗುವುದು’ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: