ಮೈಸೂರು

ಕುಲಪತಿ ಪ್ರೊ.ಮಾನೆ ವಿರುದ್ಧ ಷಡ್ಯಂತ್ರ : ಕುಲಸಚಿವರನ್ನು ವಜಾಗೊಳಿಸಲು ದಲಿತ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಆಗ್ರಹ

ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ದು ವಿನಾಕಾರಣ ಕಳೆದೆರಡು ದಿನಗಳಿಂದ ಅವರ ಮೇಲೆ ಕೇಳಿ ಬರುತ್ತಿರುವ  ಆರೋಪಗಳು, ಆಪಾದನೆಗಳು ಸತ್ಯಕ್ಕೆ ದೂರವಾದ ಸಂಗತಿಯೆಂದು ಸಂಶೋಧನಾ ವಿದ್ಯಾರ್ಥಿನಿ ಭಾಗ್ಯ ಸ್ಪಷ್ಟಪಡಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿಂದು  ವಿವಿಯ ದಲಿತ ವಿದ್ಯಾರ್ಥಿ ಒಕ್ಕೂಟ ಮತ್ತು ಸಂಶೋಧಕರ ಸಂಘದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿದ್ಯಾರ್ಥಿನಿಲಯದಲ್ಲಿ ಮೂಲಭೂತ ಸೌಕರ್ಯಗಳಿಗಾಗಿಯೇ ಪ್ರತಿಭಟನೆ ನಡೆಸುವಂತ ದುಸ್ಥಿತಿ ವಿದ್ಯಾರ್ಥಿಗಳಿಗೆ ಒದಗಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಯಾವೊಬ್ಬ ಅಧಿಕಾರಿಗಳೂ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದೇ ತಾತ್ಸಾರವನ್ನು ತೋರುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಪ್ರಭಾರ ಕುಲಪತಿ ಪ್ರೊ.ಮಾನೆಯವರು ಹಾಸ್ಟೆಲ್ ಪರಿಶೀಲಿಸಲು ಆಗಮಿಸಿದ್ದ ಸಮಯವನ್ನೇ ಅವರ ವಿರೋಧಿಗಳು ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದು ತಿಳಿಸಿದರು. ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿರುವ ಸುದ್ದಿಯಿಂದಾಗಿ ವಿದ್ಯಾರ್ಥಿನಿಯರು ಪೇಚಿಗೆ ಸಿಲುಕಿದ್ದಾರೆ. ಹಾಸ್ಟೆಲ್ ವಿದ್ಯಾರ್ಥಿನಿಯರ ಕುಟುಂಬಗಳಲ್ಲಿ ಆತಂಕ ಮೂಡಿದ್ದು ವ್ಯಾಸಂಗ ನಡೆಸುವುದೇ ದುಸ್ತರವಾಗಿದೆ. ಅಪಪ್ರಚಾರದಿಂದಾಗಿ ಭವಿಷ್ಯದ ಮೇಲೆ ಕಪ್ಪು ಚುಕ್ಕೆ ಬೀಳಲಿದೆ ಎಂದು ತಮ್ಮ ಅಳಲನ್ನು ತೊಡಿಕೊಂಡರು. ಶುದ್ಧ ಕುಡಿಯುವ ನೀರು ಸೇರಿದಂತೆ ಊಟಕ್ಕಾಗಿಯೂ ಪ್ರತಿಭಟನೆ, ಹೋರಾಟದಿಂದಲೇ ಮೂಲಭೂತ ಸೌಲಭ್ಯಗಳನ್ನು ಪಡೆಯುವಂತಹ ದೌರ್ಭಾಗ್ಯವು ವಿದ್ಯಾರ್ಥಿಗಳಿಗೆ ಒದಗಿದೆ ಎಂದು ಖೇದ ವ್ಯಕ್ತಪಡಿಸಿದರು.

ಸಂಶೋಧನಾ ಸಂಘದ ಅಧ್ಯಕ್ಷ ಮೂರ್ತಿ.ಬಿ ಮಾತನಾಡಿ ವಿದ್ಯಾರ್ಥಿಗಳನ್ನು ದಾಳವಾಗಿರಿಸಿಕೊಂಡು ಕುಲಸಚಿವ ಪ್ರೊ.ರಾಜಣ್ಣ ನಡೆಸುತ್ತಿರುವ ಕುತಂತ್ರ ಅವರ ಮಾನಸಿಕ ಅಸ್ವಸ್ಥತೆಯನ್ನು ತೋರುತ್ತಿದೆ. ಕುಲಪತಿಗಳ ವಿರುದ್ಧ ನಡೆದಿರುವ ಆರೋಪ ಶುದ್ಧ ಸುಳ್ಳು. ಅವರ ಕಾರ್ಯ ವೈಖರಿಯನ್ನು ಸಹಿಸದ ದುಷ್ಟಶಕ್ತಿಗಳು ಈ ರೀತಿ ಸುಳ್ಳು ವದಂತಿಯನ್ನು ಹಬ್ಬಿಸುತ್ತಿವೆ ಎಂದರು. ಘಟನೆಯಿಂದಾಗಿ ವಿವಿಯ ಘನತೆಗೆ ಕುಂದುಂಟಾಗಿದ್ದು ರಾಜ್ಯಪಾಲರು ಕುಲಸಚಿವ ಪ್ರೊ.ರಾಜಣ್ಣ ಅವರನ್ನು ವಜಾಗೊಳಿಸಿ ಅವರ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ನೇಮಿಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಾದ ಕಲಾವತಿ, ವಿದ್ಯಾ, ಉಮಾ, ಜಯಲಕ್ಷ್ಮೀ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷ ನಟರಾಜು ಶಿವಣ್ಣ  ಹಾಜರಿದ್ದರು. (ಕೆ.ಎಂ.ಆರ್-ಎಸ್.ಎಚ್)

 

Leave a Reply

comments

Related Articles

error: