ಮೈಸೂರು

ಪೊಗರು ಚಲನಚಿತ್ರದಲ್ಲಿನ ಬ್ರಾಹ್ಮಣ ಸಮುದಾಯದ ಅವಹೇಳನ, ಜಾತಿನಿಂದನೆ ದೃಶ್ಯ ತೆಗೆಯುವಂತೆ ಆಗ್ರಹಿಸಿ, ಅಲ್ಲಿಯವರೆಗೆ ಚಿತ್ರ ಬ್ಯಾನ್ ಗೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಫೆ.23:- ಪೊಗರು ಚಲನಚಿತ್ರದಲ್ಲಿ   ಬ್ರಾಹ್ಮಣ ಸಮುದಾಯದ ಅವಹೇಳನಕಾರಿ ದೃಶ್ಯ ಮತ್ತು ಜಾತಿನಿಂದನೆ ಮಾಡಿರುವ ದೃಶ್ಯಗಳನ್ನು ತೆಗೆದು ಹಾಕುವಂತೆ ಹಾಗೂ  ಅಲ್ಲಿಯವರೆಗೆ ಚಿತ್ರವನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿ ಬ್ರಾಹ್ಮಣ ಸಂಘ ಸಂಸ್ಥೆ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಸೆನ್ಸಾರ್ ಮಂಡಳಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಲಿ ಎಂದು ಘೋಷಣೆ ಕೂಗಿದರು.   ಈ ಸಂದರ್ಭ ಮಾತನಾಡಿದ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ ಪೊಗರು ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನಕಾರಿಯಾಗಿ ಚಿತ್ರಿಸಿರುವುದಲ್ಲದೇ, ಅವಹೇಳನಕಾರಿಯಾಗಿ ನಡೆಸಿಕೊಂಡಿರುತ್ತಾರೆ. ಏನು ಅಂದುಕೊಂಡು ಬಿಟ್ಟಿದ್ದಾರೆಂದರೆ ಬ್ರಾಹ್ಮಣರಲ್ಲಿ ಒಗ್ಗಟ್ಟಿಲ್ಲ, ಬ್ರಾಹ್ಮಣರಲ್ಲಿ ಶಕ್ತಿ ಇಲ್ಲ, ಹಾಗಾಗಿ ನಾವು ಏನು ಮಾಡಿದರೂ ನಡೆಯತ್ತೆ, ನಾವು ಹೋಗಿ ಅವರ ಬಳಿ ಕ್ಷಮಿಸಿ ಅಂತ ಕೇಳಿದರೆ ಬಿಟ್ಟು ಬಿಡುತ್ತಾರೆಂಬ ಒಂದು ಕೆಟ್ಟ ಅಭಿಪ್ರಾಯ ಬಂದು ಬಿಟ್ಟಿದೆ. ನಾವು ಇಂದು ತ್ರಿಮತಸ್ಥರು ಸೇರಿ ಒಗ್ಗಟ್ಟಾಗಿ ಬಂದಿದ್ದೇವೆ. ಯಾಕೆಂದರೆ ಒಂದು ಅವಹೇಳನವಾಗಿರುವುದು ಬ್ರಾಹ್ಮಣ ಸಮುದಾಯಕ್ಕೆ, ಬ್ರಾಹ್ಮಣ ಸಮುದಾಯ ಮಾತ್ರವಲ್ಲ ಹಿಂದೂ ಸಮುದಾಯಕ್ಕೆ ಸಹ ಅವಮಾನವಾಗಿದೆ, ಹಿಂದೂ ಗಳು ಸಹ ನಮ್ಮ ಜೊತೆ ಸೇರಿಕೊಳ್ಳಬೇಕು. ಇಡೀ ವಿಶ್ವವೇ ಸರ್ವೇ ಜನಾಃ ಸುಖೋನೋಭವಂತು ಅಂತ ಹೇಳಿ ಆಶಿಸುವ ಜನ ನಾವು. ನಮ್ಮ ಸಮುದಾಯದವರು. ಅಂತಹವರನ್ನು ಹೇಗೆಂದರೆ ಹಾಗೆ ನಡೆಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಅದು ಸರ್ವಥಾ ತಪ್ಪು, ಮಾಡೋದು ಮಾಡ್ಬಿಟ್ಟು ತಪ್ಪಾಯ್ತು ಅಂತ ಬಂದ್ಬಿಟ್ರೆ ಬಿಟ್ಟು ಬಿಡ್ತಾರೆ ಅಂತ ಭಾವನೆ ಇದೆ, ಅದು ಸುಳ್ಳು ಆ ಚಿತ್ರ ಬ್ಯಾನ್ ಆಗ್ಬೇಕು. ಏನು ಅವಹೇಳನಕಾರಿ ದೃಶ್ಯಗಳಿವೆ ಅದನ್ನು ತೆಗೆದುಹಾಕಬೇಕು. ನಮ್ಮ ಅಭಿವೃದ್ಧಿ ಮಂಡಲಿಯ ಛೇರ್ಮನ್ ಅವರನ್ನು ಭೇಟಿ ಮಾಡಿ ನಮಗೆ ಕಾಲಾವಕಾಶ ಕೊಡಿ ಅಂತ ಕೇಳಿದ್ದಾರೆ. ಕಾಲಾವಕಾಶ ಕೊಡೋಣ, ಅಲ್ಲಿಯವರೆಗೂ ಚಿತ್ರ ಬ್ಯಾನ್ ಮಾಡಲಿ, ಎಲ್ಲಾ ಮಾಡೋದು ಮಾಡಿಬಿಟ್ಟು ಒದ್ದೋನಿಗೆ ಪಾಪ ಬರತ್ತೆ ನಿಜ, ಅದು ಮುಂದಿನ ಜನ್ಮದಲ್ಲಿ, ಆದರೆ ಒದೆಸಿಕೊಂಡವನಿಗೆ ಈವಾಗ್ಲೇ ನೋವಾಗತ್ತಲ್ಲ. ನಾವು ಅದಕ್ಕಾಗಿಯೇ ಪ್ರತಿಭಟನೆ ಮಾಡುತ್ತಿದ್ದೇವೆ.  ಚಿತ್ರ  ಬ್ಯಾನ್ ಆಗಬೇಕು. ಬ್ಯಾನ್ ಆಗದೇ ಅವರೇನಾದರೂ ಚಿತ್ರವನ್ನು ಮುಂದುವರಿಸಿದಲ್ಲಿ  ಯಾವ ಯಾವ ಚಿತ್ರಮಂದಿರಗಳಲ್ಲಿ ಇದೆಯೋ ಅಲ್ಲೆಲ್ಲ, ಎಲ್ಲ ತಾಲೂಕುಗಳಲ್ಲೂ, ಎಲ್ಲ ಜಿಲ್ಲೆಗಳಲ್ಲೂ ಈ ಪ್ರತಿಭಟನೆ ಮಾಡುತ್ತೇವೆ. ಅದಲ್ಲದೆ  ನಿರ್ಮಾಪಕ ಗಂಗಾಧರ್, ನಿರ್ದೇಶಕ ನಂದಕಿಶೋರ್ ಅವರಿಬ್ಬರ ಮೇಲೆ ಎಫ್ ಐ ಆರ್ ಹಾಕಲಾಗುವುದು, ಇದರಲ್ಲಿ ಜಾತಿನಿಂದನೆ ಒಂದೇ ಅಲ್ಲ ಅವಹೇಳನಕಾರಿ ಹೇಳಿಕೆಗಳು ಇವೆ. ಜಾತಿ ನಿಂದನೆ ಎಲ್ಲ ತಾಲೂಕುಗಳಲ್ಲೂ ಹಾಕುತ್ತೇವೆ. ಚಿತ್ರದಲ್ಲಿರುವ ಅವಹೇಳನಕಾರಿ ಹೇಳಿಕೆಯನ್ನು ತೆಗೆಯುವಂತೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಬ್ರಾಹ್ಮಣ ಸಮಾಜದ  ಮುಖಂಡರುಗಳಾದ ಡಾ. ಕೆ ರಘುರಾಂ ವಾಜಪೇಯಿ , ನ೦ ಶ್ರೀಕಂಠ ಕುಮಾರ್ ,ಸಿ ವಿ ಪಾರ್ಥಸಾರಥಿ , ಶ್ರೀ ತುಳು ಶಿವಳ್ಳಿ  ಮಾಧ್ವ ಬ್ರಾಹ್ಮಣ  ಮಹಾಮಂಡಳಿ  ಎಂ ಕೆ ಪುರಾಣಿಕ್ ,ಪಿ ವಿ ನಾಗೇಶ್ ,ಮೋಹನ್, ರಾಮ್ ದಾಸ್,  ಗ್ರಾಮಾಂತರ ಅಧ್ಯಕ್ಷ ರಾದ ಗೋಪಾಲ್ ರಾವ್ ,ನಗರ ಪಾಲಿಕಾ ಸದಸ್ಯರಾದ ಮಾ ವಿ ರಾಮ್ ಪ್ರಸಾದ್, ಎಂ ಸಿ ರಮೇಶ್,ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷರಾದ ಎಚ್ ಎನ್ ಶ್ರೀಧರ್ ಮೂರ್ತಿ ,ಸಂಘಟನೆಯ ಮುಳ್ಳೂರು ಗುರುಪ್ರಸಾದ್ ,ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಅಜಯ್ ಶಾಸ್ತ್ರಿ, ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ , ಅಪೂರ್ವ ಸುರೇಶ್ ,ಪ್ರಶಾಂತ್ ,ಗುರುಪ್ರಸಾದ್ ,ಸುಮಂತ್ ಶಾಸ್ತ್ರಿ ,ಜಯಸಿಂಹ, ರಂಗನಾಥ್,  ಜ್ಯೋತಿ, ಲತಾ ಮೋಹನ್ ,ಪುಟ್ಟಸ್ವಾಮಿ , ರಾಜಗೋಪಾಲ್ ,ಕೆ.ಎಂ ನಿಶಾಂತ್ ,ಗಣೇಶ್ ಪ್ರಸಾದ್ ,ವೆಂಕಟೇಶ್, ಶ್ರೀನಿವಾಸ್ ಭಾಷ್ಯಂ ,ಹೂಮ್ಮೆ ಮಂಜುನಾಥ್, ವಿಜಯಕುಮಾರ್ ,ಮುಳ್ಳೂರು ಸುರೇಶ್ ,ರಾಕೇಶ್ ಭಟ್ ,ಸುಚಿಂದ್ರ ,ಚಕ್ರಪಾಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: