ಮೈಸೂರು

ಕಠಿಣ ಶ್ರಮ, ಪರಿಪೂರ್ಣ ಯೋಚನೆ, ತಾಳ್ಮೆ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ : ಹೆಚ್.ಎನ್. ರಾಮತೀರ್ಥ

ವಿಶ್ವಪ್ರಜ್ಞ ಕಾಲೇಜಿನಲ್ಲಿ ‘ದ ಎಸೆನ್ಸ್’  ಸೈನ್ಸ್ ಕ್ಲಬ್ ಉದ್ಘಾಟನೆ

ಮೈಸೂರು,ಫೆ.23:-  ಮೈಸೂರಿನ ದಟ್ಟಗಳ್ಳಿಯಲ್ಲಿರುವ “ಎಸ್‍  ವಿ ಜಿ ಸೆಂಟರ್ ಆಫ್ ಎಕ್ಸಲೆನ್ಸ್” ವಿಶ್ವಪ್ರಜ್ಞ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ  ‘ದ ಎಸೆನ್ಸ್’  ಸೈನ್ಸ್ ಕ್ಲಬ್  ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರಿನ ಚಿನ್ಮಯ ವಿದ್ಯಾಲಯದ ಅಧ್ಯಕ್ಷರಾದ ಹೆಚ್.ಎನ್. ರಾಮತೀರ್ಥ ಜ್ಯೋತಿ ಬೆಳಗಿಸಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದರೆ ಕಠಿಣ ಶ್ರಮ, ಪರಿಪೂರ್ಣ ಯೋಚನೆ, ತಾಳ್ಮೆಯಿಂದ ಕಾಯುವಿಕೆಯ ಗುಣವನ್ನು ಹೊಂದಿರಬೇಕು ಆಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ಹೇಳಿದರು.

ಶಿಕ್ಷಣವೆಂಬುದು ನಮ್ಮ ಜೀವನದ ಮೂಲ ಬೇರು, ಸಂಸ್ಕೃತಿ ಎಂಬುದು ಅದರ ಹೂ, ನಮ್ಮ ಒಳ್ಳೆಯ ಗುಣ ಸ್ವಭಾವ, ನಡೆನುಡಿ ಅವೆಲ್ಲವೂ ಅದರಿಂದ ಸಿಗುವ ಉತ್ತಮ ಹಣ್ಣುಗಳು ಆದ್ದರಿಂದ ಶಿಕ್ಷಣ ನಮ್ಮ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಉತ್ತಮ ವ್ಯಕ್ತಿಯಾಗಿ ಈ ಸಮಾಜದಲ್ಲಿ ಬಾಳಬೇಕಾದರೆ ಉತ್ತಮ ಶಿಕ್ಷಣ ಬಹಳ ಮುಖ್ಯವಾಗುತ್ತದೆ ಎಂದು ಹೇಳಿದರು.

ಜ್ಞಾನವಿಲ್ಲದಾಗ ನಮ್ಮ ನಡುವಳಿಕೆ ನಾಶಹೊಂದುತ್ತದೆ. ತಿಳುವಳಿಕೆ ಇಲ್ಲದಾಗ ಜ್ಞಾನ ನಾಶವಾಗುತ್ತದೆ. ಇವೆರಡು ಇಲ್ಲದಾಗ ನಾವು ನಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತೇವೆ. ಈ ಸಮಾಜದಲ್ಲಿ ಉತ್ತಮ ಜ್ಞಾನ, ಒಳ್ಳೆಯ ನಡತೆ ಹೊಂದಿರುವ ಮನುಷ್ಯರನ್ನು ಮಾತ್ರ ಗೌರವಿಸಲಾಗುತ್ತದೆ. ನೀವು ಇಲ್ಲಿ ಪಡೆಯುವ ಶಿಕ್ಷಣದಿಂದ ಈ ಎಲ್ಲಾ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ  ಘನತೆಯಿಂದ ಕೂಡಿದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.

ವಿಜ್ಞಾನ ಸಂಘದ ವಿದ್ಯಾರ್ಥಿ ಪದಾಧಿಕಾರಿಗಳ ಆಯ್ಕೆ

ಇದೇ ಸಂದರ್ಭದಲ್ಲಿ  ವಿಜ್ಞಾನ ಸಂಘದ ವಿದ್ಯಾರ್ಥಿ ಪದಾಧಿಕಾರಿಯಾಗಿ ಎನ್.ದರ್ಶನ್, ಅಧ್ಯಕ್ಷ್ಷ, ದಿಶಾ ಅನಿಲ್‍ಕುಮಾರ್ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.

ಸಮರ್ಪಣೆ ಸೇವಾ ಟ್ರಸ್ಟ್ ನಿಂದ ವಿದ್ಯಾರ್ಥಿಗಳಿಗೆ  ಸನ್ಮಾನ

ಕಳೆದ ಶೈಕ್ಷಣಿಕ ವರ್ಷ ದ್ವಿತೀಯ ಪಿಯುಸಿ ವಿಜ್ಞಾನದಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ  ಭರಣಿ ಸಂಜಯ್, ಸಿ.ದೀಕ್ಷಿತಾ, ಎಂ.ಜೆ. ನಿಸರ್ಗ, ಬಿ.ಎಂ.ಅನುಷಾ, ಬಿ.ಎಸ್.ಮೋನಿಕಾ ಇವರನ್ನು ಮೈಸೂರಿನ ಸಮರ್ಪಣೆ ಸೇವಾ ಟ್ರಸ್ಟ್ ವತಿಯಿಂದ  ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು  ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿಯಾದ ವಿಶ್ವನಾಥ್ ಶೇಷಾಚಲರವರು ವಹಿಸಿದ್ದರು. ವೇದಿಕೆಯಲ್ಲಿ ಮೈಸೂರಿನ ಚಿನ್ಮಯ ವಿದ್ಯಾಲಯದ ನಿರ್ದೇಶಕರಾದ ಕೆ. ಮಂಗಳ, ಕೆ.ಆರ್.ಸಂಚಾರ ಠಾಣೆ ಪೋಲೀಸ್ ಸಬ್ ಇನ್ಸಪೆಕ್ಟರ್ ವನಜಾಕ್ಷಿ, ಮಹಿಳಾ ಮುಖ್ಯ ಪೇದೆ ಎಂ. ನಿರ್ಮಲಾ, ಮೈಸೂರಿನ ಸಮರ್ಪಣೆ ಸೇವಾ ಟ್ರಸ್ಟ್‍ ನ ಅಧ್ಯಕ್ಷರಾದ ಲಯನ್ ಕುಮಾರ್, ಯುವರಾಜ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ.ಎಂ.ಎಸ್. ಮಹೇಶ್, ಕಾಲೇಜಿನ ಆಡಳಿತಾಧಿಕಾರಿ ಡಾ.ಕೆಂಪೇಗೌಡ, ಶೈಕ್ಷಣಿಕ ಸಲಹೆಗಾರರಾದ ಹೆಚ್.ಸತ್ಯಪ್ರಸಾದ್,  ಪ್ರಾಂಶುಪಾಲರಾದ ರಚನ್ ಅಪ್ಪಣಮಯ್ಯ, ವಿಜ್ಞಾನ ಸಂಘದ ಸಂಯೋಜಕರಾದ ಉಪನ್ಯಾಸಕಿ ಅಮೂಲ್ಯ ಇವರು ಉಪಸ್ಥಿತರಿದ್ದರು. ಸಮಾರಂಭಕ್ಕೆ ಉಪನ್ಯಾಸಕ ಡಾ. ಪ್ರದೀಪ್ ಡಿ’ಕುನ್ಹಾ, ಸ್ವಾಗತಿಸಿದರು, ವಿದ್ಯಾರ್ಥಿನಿ ದಿವಿಜ ವಂದನಾರ್ಪಣೆಗೈದರು,  ಪ್ರಿಯಾಂಕಾ ಕಾರ್ಯಕ್ರಮ ನಿರೂಪಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: