ದೇಶಪ್ರಮುಖ ಸುದ್ದಿ

ಸ್ಫೋಟಕ ವಸ್ತುಗಳ ಬಳಕೆಗೆ ಕಡ್ಡಾಯ ಕಾನೂನು ಜಾರಿ: ಸಚಿವ ಮುರುಗೇಶ್ ನಿರಾಣಿ

ನವದೆಹಲಿ,ಫೆ.23- ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿರುವ ಜಿಲೆಟಿನ್ ಸ್ಫೋಟ ಪ್ರಕರಣದ ಬಳಿಕ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದೆ. ಇನ್ನು ಮುಂದೆ ಕಲ್ಲುಕ್ವಾರಿ ಹಾಗೂ ಗಣಿಗಾರಿಕೆ ಪ್ರದೇಶಗಳಲ್ಲಿ ಸ್ಫೋಟಕ ವಸ್ತುಗಳನ್ನು ಬಳಸಲು ಸರ್ಕಾರದಿಂದ ಅನುಮತಿ ಪಡೆದಿರಬೇಕು. ಅದಕ್ಕಾಗಿ ಹೊಸ ಕಾನೂನು ಜಾರಿ ಮಾಡುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಕಾನೂನು ಬಾಹಿರವಾಗಿ ಕಲ್ಲು ಕ್ವಾರಿ ಮತ್ತು ಗಣಿ ಪ್ರದೇಶಗಳಲ್ಲಿ ಸ್ಪೋಟಕ ವಸ್ತುಗಳನ್ನು ಬಳಕೆ ಮಾಡುತ್ತಿರುವುದರಿಂದಲೇ ಇಂಥ ಘಟನೆಗಳು ನಡೆಯುತ್ತಿವೆ. ಇದನ್ನು ತಡೆಯಲು ಸದ್ಯದಲ್ಲೇ ಹೊಸ ಕಾನೂನು ಜಾರಿ ಮಾಡಲಾಗುವುದು. ಸರ್ಕಾರದಿಂದ ಲೈಸೆನ್ಸ್ ಪಡೆದವರು ಮಾತ್ರ ಸ್ಪೋಟಕ ವಸ್ತುಗಳನ್ನು ಬಳಸುವ ಕಾನೂನು ಜಾರಿ ಮಾಡಲಾಗುವುದು ಎಂದರು.

ಕೆಲವು ಕಡೆ ಕಾನೂನು ಬಾಹಿರವಾಗಿ ಕಲ್ಲುಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಇದನ್ನು ತಡೆಗಟ್ಟಲು ಇಲಾಖಾ ಮಟ್ಟದಲ್ಲಿ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ. ಒಂದು ವೇಳೆ ನಮ್ಮ ಅಧಿಕಾರಿಗಳು ಇಂತಹದರಲ್ಲಿ ಭಾಗಿಯಾಗಿರುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಸಹ ಮಾಹಿತಿ ನೀಡಲಾಗಿದೆ ಎಂದರು.

ನಾವು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಅತ್ಯಂತ ದುರದೃಷ್ಟಕರ ಹಾಗೂ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ ಅವರು, ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ಮತ್ತು ಅಕ್ರಮಗಳಲ್ಲಿ ಭಾಗಿಯಾಗಿರುವ ಯಾರಾದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಘಟನೆಯಲ್ಲಿ ಯಾರೇ ಪ್ರಭಾವಿಗಳಾಗಿದ್ದರೂ ಎಷ್ಟೇ ದೊಡ್ಡವರಾಗಿದ್ದರೂ ಸುಮ್ಮನೆ ಬಿಡುವುದಿಲ್ಲ. ಕಾನೂನಿನ ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಗಣಿಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಗೆ ಗಣಿಗಾರಿಕೆ ಸ್ಥಳಗಳಲ್ಲಿ ಜಿಲಿಟಿನ್ ಕಡ್ಡಿಗಳು ಸ್ಫೋಟಕ ವಸ್ತುಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವ ಬಗ್ಗೆ ತರಬೇತಿ ನೀಡುವ ಅಗತ್ಯವಿದೆ ಎಂದ ಅವರು, ರಾಜ್ಯದಲ್ಲಿ ಗಣಿಗಾರಿಕೆ ಶಾಲೆಯನ್ನು ಸ್ಥಾಪಿಸಲು ತೀರ್ಮಾನಿಸಿದ್ದೇವೆ. ಜೊತೆಗೆ ಗಣಿಗಾರಿಕೆ ಪ್ರದೇಶಗಳಲ್ಲಿನ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂದರು.

ಕೆಲವು ಅಧಿಕೃತ ಮತ್ತು ವೈಯಕ್ತಿಕ ಕೆಲಸಗಳಿಂದಾಗಿ ನಾನು ದೆಹಲಿಯಲ್ಲಿದ್ದೇನೆ. ನಾನು ಇಂದು ಸಂಜೆ ಬೆಂಗಳೂರಿಗೆ ತೆರಳಲಿದ್ದೇನೆ. ಅಲ್ಲಿಂದ ನೇರವಾಗಿ ಚಿಕ್ಕಬಳ್ಳಾಪುರದ ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದೇನೆ.  ಗಾಯಾಳುಗಳಿಗೆ ಸರ್ಕಾರದ ವತಿಯಿಂದ ಸೂಕ್ತವಾದ ಚಿಕಿತ್ಸೆ ನೀಡಲಾಗುವುದು. ಸಂತ್ರಸ್ತರ ಕುಟುಂಬಗಳಿಗೆ ಮತ್ತು ಗಾಯಗೊಂಡ ವ್ಯಕ್ತಿಗೆ ಸರ್ಕಾರವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಿದೆ. ಘಟನೆ ನಡೆದ ನಂತರ ಕೆಲವರು ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ಪೊಲೀಸರು ತಕ್ಷಣವೇ ಅವರನ್ನು ಬಂಧಿಸುವ ವಿಶ್ವಾಸವಿದೆ ಎಂದು ತಿಳಿಸಿದರು. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: