ಕರ್ನಾಟಕಪ್ರಮುಖ ಸುದ್ದಿ

ಸರ್ಕಾರಕ್ಕೆ ಜನರ ಜೀವದ ಬಗ್ಗೆ ಕಮಿಟ್ಮೆಂಟ್ ಇಲ್ಲ: ಎಚ್.ಡಿ.ಕುಮಾರಸ್ವಾಮಿ ಕಿಡಿ

ರಾಮನಗರ,ಫೆ.23-ಚಿಕ್ಕಬಳ್ಳಾಪುರ ಜಿಲೆಟಿನ್‌ ಸ್ಫೋಟಕ್ಕೆ ರಾಜ್ಯ ಸರಕಾರದ ಬೇಜವಾಬ್ದಾರಿತನ, ಅಧಿಕಾರಿಗಳ ಪ್ರೋತ್ಸಾಹವೇ ಕಾರಣ. ಸರ್ಕಾರಕ್ಕೆ ಜನರ ಜೀವದ ಬಗ್ಗೆ ಕಮಿಟ್ಮೆಂಟ್ ಇಲ್ಲ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಘಟನೆ ನಡೆದಾಗ ಮಾಧ್ಯಮಗಳ ಮುಂದೆ ಸಚಿವರು ಪ್ರತಿಕ್ರಿಯೆ ಕೊಡುತ್ತಾರೆ. ಮಂತ್ರಿಗಳ ಹೇಳಿಕೆಯನ್ನು ನಾನು ನೋಡಿದ್ದೇನೆ. ಒಂದು ವಾರದ ಮುಂಚೆಯೇ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಆದರೂ, ಈ ಘಟನೆ ನಡೆದಿದೆ ಅಂದ್ರೆ ಇವರಿಗೆ ಮೊದಲೇ ಗೊತ್ತಿತ್ತು ಅನಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳಿಂದಲೇ ಅಕ್ರಮ ಗಣಿಗಾರಿಕೆ: ರಾಜ್ಯದ ಜನಪ್ರತಿನಿಧಿಗಳೇ ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಇಡೀ ರಾಜ್ಯದಲ್ಲಿ ನಿರಂತರವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದರಲ್ಲಿ ಹೆಚ್ಚಿನ ಹಣ ಸಿಗಲಿದೆ ಎಂದು ಅಧಿಕಾರಿಗಳು ಕೂಡ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ರಾಜಕಾರಣಿಗಳ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಶಾಶ್ವತವಾದ ಪರಿಹಾರ ಸಿಗಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಸಿಎಂ ಬಿಎಸ್‌ ಯಡಿಯೂರಪ್ಪ ನೇತೃತ್ವದ ಸರಕಾರ ಹಣ ಲೂಟಿ ಮಾಡುವುದನ್ನ ಬಿಟ್ಟು ಬೇರೆನೂ ಮಾಡುತ್ತಿಲ್ಲ. ಭ್ರಷ್ಟಾಚಾರವನ್ನು ನಾವು ತಡೆಯುತ್ತೇವೆಂದು ಪ್ರಧಾನಿಗಳು ಪಶ್ಚಿಮ ಬಂಗಾಳದಲ್ಲಿ ಭಾಷಣ ಮಾಡುತ್ತಾರೆ. ಆದರೆ, ಕರ್ನಾಟಕದಲ್ಲಿ ನಡೆಯುತ್ತಿರುವುದು ಜಗಜಾಹೀರಾಗಿದೆ. ಈ ಸರ್ಕಾರದಲ್ಲಿ ಹಣ ಇಲ್ಲದೇ ಯಾವುದೇ ಫೈಲ್ ಮೂವ್‌ ಆಗಲ್ಲ ಎಂದು ಮೈತ್ರಿ ಸರ್ಕಾರ ಉರುಳಿಸಿದವರೇ ಹೇಳ್ತಿದ್ದಾರೆ ಇವತ್ತು. ಇನ್ನೊಬ್ಬರು ದೆಹಲಿಗೆ ಹೋಗಿದ್ದಾರೆ. ಇಷ್ಟಾದರೂ ಸಹ ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

ಮೈತ್ರಿ ಸರ್ಕಾರದಲ್ಲಿ ಕಾವೇರಿ ಬೇಸಿನ್ ಪ್ರದೇಶಕ್ಕೆ 6 ಸಾವಿರ ಕೋಟಿ ರೂ. ಯೋಜನೆಗೆ ಮಂಜೂರಾತಿ ನೀಡಿದ್ದೆ. ಆದರೆ, ಬಿಜೆಪಿ ಸರ್ಕಾರ ಬಂದು 6 ಸಾವಿರ ಕೋಟಿ ರೂ. ಅನುದಾನವನ್ನು ಹಿಂಪಡೆದಿದ್ದಾರೆ. ಇವತ್ತು ತಮಿಳುನಾಡಿನವರು ಕೇಂದ್ರದಿಂದ 6 ಸಾವಿರ ಕೋಟಿ ರೂ. ಹಣ ಪಡೆಯಲು ಮುಂದಾಗಿದ್ದಾರೆ. ಅಲ್ಲಿನ ಕೆರೆಗಳಿಗೆ ನೀರು ತುಂಬಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇದರಿಂದಲೇ ಗೊತ್ತಾಗಲಿದೆ ರಾಜ್ಯದ ಬಿಜೆಪಿ ಸರ್ಕಾರದ ನಡೆ ಎಂದು ದೂರಿದರು. (ಎಂ.ಎನ್)

 

Leave a Reply

comments

Related Articles

error: