ಕರ್ನಾಟಕಪ್ರಮುಖ ಸುದ್ದಿಮನರಂಜನೆ

`ಪೊಗರು’ ಸಿನಿಮಾ ವಿವಾದ: ಬ್ರಾಹ್ಮಣ ಸಮುದಾಯದ ಕ್ಷಮೆ ಕೋರಿದ ನಿರ್ದೇಶಕ ನಂದ ಕಿಶೋರ್, ಚಿತ್ರದ 14 ದೃಶ್ಯಗಳಿಗೆ ಕತ್ತರಿ

ಬೆಂಗಳೂರು,ಫೆ.23- ಧ್ರುವ ಸರ್ಜಾ ಅಭಿನಯದ `ಪೊಗರು’ ಚಿತ್ರದಲ್ಲಿ ಬ್ರಾಹ್ಮಣರಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಿರ್ದೇಶಕ ನಂದಕಿಶೋರ್ ಬ್ರಾಹ್ಮಣ ಸಮುದಾಯದವ ಕ್ಷಮೆ ಕೇಳಿದ್ದಾರೆ. ಅಲ್ಲದೆ, ಆಕ್ಷೇಪಾರ್ಹ 14 ದೃಶ್ಯಗಳನ್ನು ಚಿತ್ರದಿಂದ ತೆಗೆಯಲು ಒಪ್ಪಿಕೊಂಡಿದ್ದಾರೆ.

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಅವರ ಜತೆ ಜಂಟಿ ಪತ್ರಿಕಾಗೋಷ್ಟಿ ನಡೆಸಿದ ನಿರ್ದೇಶಕ ನಂದಕಿಶೋರ್, ನಮಗೆ ಯಾವುದೇ ಸಮುದಾಯವನ್ನು ಅವಮಾನಗೊಳಿಸುವ ಹಾಗೂ ಯಾರಿಗೂ ವೈಯಕ್ತಿಕವಾಗಿ ನೋವು ಮಾಡುವ ಉದ್ದೇಶ ಇರಲಿಲ್ಲ. ಸನ್ನಿವೇಶಕ್ಕೆ ಅಗತ್ಯವೆಂದು ಆ ದೃಶ್ಯಗಳನ್ನು ಶೂಟ್ ಮಾಡಲಾಗಿತ್ತು. ಒಬ್ಬರನ್ನು ನೋಯಿಸಿ ಹಣ ಗಳಿಕೆ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ. ಆ ದೃಶ್ಯಗಳಿಂದ ನೋವಾಗಿದ್ದರೆ ನಾನು ಬ್ರಾಹ್ಮಣ ಸಮುದಾಯಕ್ಕೆ ಕ್ಷಮೆ ಕೋರುತ್ತೇನೆ ಎಂದರು.

ವಿವಾದಿತ ದೃಶ್ಯಗಳನ್ನು ಡಿಲೀಟ್ ಮಾಡಲು ಎರಡು ದಿನ ಕಾಲಾವಕಾಶ ಕೇಳಿರುವ ನಂದ ಕಿಶೋರ್, ಇವತ್ತಿನಿಂದಲೇ ಕಾರ್ಯೋನ್ಮುಖರಾಗುವುದಾಗಿ ಭರವಸೆ ನೀಡಿದರು. ಜತೆಗೆ ಇನ್ಮುಂದೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುತ್ತೇನೆ ಎಂದರು.

ಇದೇ ವೇಳೆ ಮಾತಾಡಿದ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಪೊಗರು ಚಿತ್ರದಲ್ಲಿ ನಮ್ಮ ಸಮುದಾಯಕ್ಕೆ ಅಪಮಾನ ಮಾಡಿರುವಂತಹ ದೃಶ್ಯಗಳನ್ನು ನೋಡಿ ನೋವಾಯಿತು. ನಿರ್ದೇಶಕರು ಚಿತ್ರದಲ್ಲಿಯ ವಿವಾದಿತ 14 ದೃಶ್ಯಗಳನ್ನು ತೆಗೆಯುವಂತೆ ನಾವು ಮಾಡಿರುವ ಮನವಿಗೆ ಒಪ್ಪಿಕೊಂಡಿದ್ದಾರೆ. ಇನ್ಮುಂದೆ ಬ್ರಾಹ್ಮಣರನ್ನು ಕೆಣಕಲು ಹೋಗಬೇಡಿ, ನಮ್ಮ ಸಮಾಜಕ್ಕೆ ಅವಮಾನ ಮಾಡದಿರಿ ಎಂದು ರಾಜಕಾರಣಿಗಳಿಗೆ ಹಾಗೂ ಚಿತ್ರರಂಗಕ್ಕೆ ಪತ್ರಿಕಾಗೋಷ್ಟಿ ಮೂಲಕ ಎಚ್ಚರಿಕೆ ನೀಡಿದರು.

ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡಲಾಗಿದೆ ಎಂದು ಬ್ರಾಹ್ಮಣ ಸಮುದಾಯದವರು ಹಲವೆಡೆ ಪ್ರತಿಭಟನೆ ನಡೆಸಿದ್ದರು. ಇದೀಗ ವಿವಾದಕ್ಕೆ ತೆರೆ ಎಳೆದಂತಾಗಿದೆ. (ಎಂ.ಎನ್)

Leave a Reply

comments

Related Articles

error: