
ಮೈಸೂರು
ಭಾರೀ ಕುತೂಹಲ ಮೂಡಿಸಿರುವ ಮೈಸೂರು ಮೇಯರ್-ಉಪಮೇಯರ್ ಚುನಾವಣೆ
ಮೈಸೂರು,ಫೆ.24:- ಇಂದು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಉಪಮೇಯರ್ ಹುದ್ದೆಗೆ ಚುನಾವಣೆ ನಡೆಯಲಿದ್ದು, ಟ್ವಿಸ್ಟ್ ಸಿಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಮಾಜಿ ಸಿಎಂ, ಜೆಡಿಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಪಕ್ಷೇತರ ಸದಸ್ಯರು ರೆಸಾರ್ಟ್ನಲ್ಲಿ ಕಾಯ್ದುಕುಳಿತಿದ್ದಾರೆ. ಪಕ್ಷೇತರ ಸದಸ್ಯ ಸಮೀವುಲ್ಲಾ, ಕೆ.ವಿ.ಶ್ರೀಧರ್ ಈಗಾಗಲೇ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತುಕತೆಗೆ ಆಹ್ವಾನಿಸಿದ್ದಾರೆ ಎನ್ನಲಾಗಿದ್ದು, ಈ ಭೇಟಿಯು ಚುನಾವಣೆಯಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಹೆಚ್ಡಿ ಕುಮಾರಸ್ವಾಮಿಯವರ ಬಳಿ ಪಕ್ಷೇತರರು ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನದ ಬೇಡಿಕೆ ಇಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಏತನ್ಮಧ್ಯೆ ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದೆ. ಮುಕ್ಕಾಲು ಗಂಟೆಯಾದರೂ ಪಾಲಿಕೆಯತ್ತ ಅಭ್ಯರ್ಥಿಗಳು, ಸದಸ್ಯರು ಬಂದಿಲ್ಲ.
ಪಾಲಿಕೆಯ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ನಾಮಪತ್ರ ಸ್ವೀಕಾರಕ್ಕೆ ಪರಿಷತ್ ಕಾರ್ಯದರ್ಶಿಗಳು ಕಾದು ಕುಳಿತಿದ್ದಾರೆ.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ದೋಸ್ತಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಚುನಾವಣಾ ಕೇಂದ್ರಕ್ಕೆ ನಾಯಕರು ಇನ್ನೂ ಆಗಮಿಸಿಲ್ಲ. ನಾಮಪತ್ರ ಸಲ್ಲಿಕೆಯ ಸಮಯವಾದರೂ ಉಭಯ ನಾಯಕರು ರೆಸಾರ್ಟ್ ನಲ್ಲೇ ಕುಳಿತಿದ್ದಾರೆ. ಚುನಾವಣಾ ಕೇಂದ್ರದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಚುನಾವಣಾ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ನೂತನ ಮೇಯರ್, ಉಪ ಮೇಯರ್ ಶುಭ ಕೋರಲು ಸಿಬ್ಬಂದಿಗಳು ಹೂಗುಚ್ಛಗಳನ್ನು ತಂದಿರಿಸಿದ್ದಾರೆ. (ಕೆ.ಎಸ್,ಎಸ್.ಎಚ್)