
ಕರ್ನಾಟಕಪ್ರಮುಖ ಸುದ್ದಿ
ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣ: ನಾಲ್ವರ ಬಂಧನ
ಚಿಕ್ಕಬಳ್ಳಾಪುರ,ಫೆ.24-ತಾಲೂಕಿನ ಹಿರೇನಾಗವಲ್ಲಿಯಲ್ಲಿ ಸಂಭವಿಸಿದ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಾಲೀಕರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಘವೇಂದ್ರ ರೆಡ್ಡಿ, ಪ್ರವೀಣ್, ರಿಯಾಜ್, ಮಧುಸೂದನ್ ರೆಡ್ಡಿ ಬಂಧಿತ ಆರೋಪಿಗಳು. ಆರೋಪಿಗಳನ್ನು ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿದ್ದು, ಕರ್ನಾಟಕಕ್ಕೆ ಕರೆತರಲಾಗುತ್ತಿದೆ. ಮತ್ತೊಬ್ಬ ಮಾಲೀಕ ಹಾಗೂ ಪ್ರಮುಖ ಆರೋಪಿ ನಾಗರಾಜ್ ತಲೆ ಮರೆಸಿಕೊಂಡಿದ್ದಾನೆ. ಆತನಿಗಾಗಿ ತೀವ್ರ ಶೋಧ ನಡೆಯುತ್ತಿದೆ.
ಶಿವಮೊಗ್ಗ ಜಿಲ್ಲೆಯ ಹುಣಸೋಡು ದುರಂತ ಮಾಸುವ ಮುನ್ನವೇ ಚಿಕ್ಕಬಳ್ಳಾಪುರ ತಾಲೂಕಿನ ಹಿರೇನಾಗವೇಲಿಯಲ್ಲಿ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡು 6 ಮಂದಿ ಸಾವನ್ನಪ್ಪಿದ್ದಾರೆ. ಆಂಧ್ರದ ಮೂವರು, ನೇಪಾಳ, ಬಾಗೇಪಲ್ಲಿ, ಚೇಳೂರಿನ ತಲಾ ಒಬ್ಬರು ಈ ಸ್ಫೋಟದಲ್ಲಿ ಮೃತಪಟ್ಟಿದ್ದರು. ಜಿಲೆಟಿನ್ ಸ್ಫೋಟದ ರಭಸಕ್ಕೆ ದೇಹ ಛಿದ್ರ ಛಿದ್ರವಾಗಿತ್ತು. ಘಟನೆಯಲ್ಲಿ ವಾಹನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸಂಸದ ಬಚ್ಚೇಗೌಡ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇನ್ನು ಹಿರೆನಾಗವೇಲಿಯಲ್ಲಿ 3 ಎಕರೆಯಲ್ಲಿ ಕಲ್ಲುಕ್ವಾರಿ ಇದೆ. ಜೊತೆಗೆ 3 ಎಕರೆಯಲ್ಲಿ ಕ್ರಷರ್ ಇದೆ. ಈ ಕ್ವಾರಿಯ ಹೆಸರು ಶ್ರೀ ಶಿರಡಿ ಸಾಯಿ ಎಜೆನ್ಸೀಜ್. ಇದಕ್ಕೆ 3 ಜನ ಪಾಲುದಾರರು. ಒಬ್ಬರು ಕರ್ನಾಟಕದ ನಾಗರಾಜ ಮತ್ತು ಇಬ್ಬರು ಆಂಧ್ರ ಮೂಲದ ರೆಡ್ಡಿಗಳಾಗಿದ್ದಾರೆ. (ಎಂ.ಎನ್)