ಮೈಸೂರು

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ, ದರ ಕಡಿತಕ್ಕೆ ಒತ್ತಾಯಿಸಿ ಸೈಕಲ್ ತುಳಿಯುವ ಮೂಲಕ ಮನವಿ ಪತ್ರ

ಮೈಸೂರು,ಫೆ.24:- ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿ, ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ, ಆಟೋ ಚಾಲಕರ ಸಂಘ, ಟ್ಯಾಕ್ಸಿ ಮತ್ತು ಓಲಾ ಕ್ಯಾಬ್ ಚಾಲಕರ ಸಂಘ, ದಲಿತ ಸಂಘರ್ಷ ಸಮಿತಿ, ಸವಿತ ಸಮಾಜ ಸಂಘರ್ಷ ಸಮಿತಿ, ಕರ್ನಾಟಕ ಕನ್ನಡ ವೇದಿಕೆ, ಪರಿಸರವಾದಿಗಳ ಒಕ್ಕೂಟ, ಕರ್ನಾಟಕ ರಾಜ್ಯ ಕನಕ ಯುವ ಸೇನೆ, ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ನ್ಯಾಯಾಲಯದ ಮುಂಭಾಗ ಸೈಕಲ್ ತುಳಿಯುವುದರ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಯಿತು.

ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಸೈಕಲ್ ತುಳಿದರೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಹಸಿರು ನಿಶಾನೆ ತೋರುವ ಮೂಲಕ  ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಇಡೀ ದೇಶವೇ ಕೊರೋನಾ ಮಹಾಮಾರಿಯಿಂದ ತತ್ತರಿಸಿದ್ದು ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಜನಸಾಮಾನ್ಯರು ಮತ್ತು ಕೂಲಿಕಾರ್ಮಿಕರು ಜೀವನ ನಡೆಸುವುದೇ ಕಷ್ಟಕರವಾಗಿರುವಾಗ ಇಂತಹ ಸಂಕಷ್ಟದ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಡೀಸೆಲ್ ಮತ್ತು ಪೆಟ್ರೋಲ್ ಹಾಗೂ ದಿನನಿತ್ಯದ ಬಳಕೆಯ ಅವಶ್ಯಕ ವಸ್ತುಗಳನ್ನು ಏರಿಸುತ್ತಿರುವುದು ಸ್ವಲ್ಪವೂ ಮಾನವೀಯತೆ ಇಲ್ಲದೆ ವರ್ತಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವರ್ತನೆ ಬರೆಎಳೆದಂತಾಗಿದೆ. ಅದರಲ್ಲೂ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಯತೇಚ್ಛವಾಗಿ ಏರಿಸುತ್ತಿರುವುದನ್ನು ಖಂಡಿಸಿ ಬೆಲೆ ಇಳಿಕೆ ಮಾಡುವಂತೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಲಾಗುತ್ತಿದೆ ಎಂದರು.

ಈ ಸಂದರ್ಭ   ಪ್ರೊ.ನಂಜರಾಜೇ ಅರಸ್, ಮಾಜಿ ಮೇಯರ್ ಪುರುಷೋತ್ತಮ್, ಜಾಕೀರ್ ಹುಸೇನ್, ಡೈರಿ ವೆಂಕಟೇಶ್, ರಾಜಶೇಖರ್ ಕದಂಬ, ಎಂ.ಜಿ.ಆರ್.ಅರಸ್, ಸಿ.ಸಿದ್ದರಾಜು, ರಿಷಿ ವಿಶ್ವಕರ್ಮ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: