ಪ್ರಮುಖ ಸುದ್ದಿವಿದೇಶ

ಗ್ರೀನ್‌ ಕಾರ್ಡ್‌ ಮೇಲಿನ ನಿಷೇಧ ಹಿಂಪಡೆದ ಜೋ ಬಿಡೆನ್

ವಾಷಿಂಗ್ಟನ್‌,ಫೆ.25-ವಿದೇಶಿಯರಿಗೆ ಶಾಶ್ವತ ವಾಸ್ತವ್ಯ ಕಲ್ಪಿಸುವ ಗ್ರೀನ್‌ ಕಾರ್ಡ್‌ಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಡ್ ತಡೆ ನೀಡಿದ್ದರು. ಇದೀಗ ಹಾಲಿ ಅಧ್ಯಕ್ಷ ಜೋ ಬಿಡೆನ್ ಗ್ರೀನ್ ಕಾರ್ಡ್ ಮೇಲಿನ ನಿಷೇಧವನ್ನು ತೆಗೆದುಹಾಕಿದ್ದಾರೆ.

ಆ ಮೂಲಕ ಗ್ರೀನ್‌ ಕಾರ್ಡ್‌ ಪಡೆಯಲು ಯತ್ನಿಸುತ್ತಿರುವ ಭಾರತೀಯರು ಸೇರಿದಂತೆ ಲಕ್ಷಾಂತರ ಮಂದಿಗೆ ರಿಲೀಫ್‌ ಸಿಕ್ಕಿದೆ. ಹೊಸದಾಗಿ ಗ್ರೀನ್‌ ಕಾರ್ಡ್‌ ಪಡೆಯಲು ಇನ್ನು ಮುಂದೆ ಅರ್ಜಿ ಸಲ್ಲಿಸಬಹುದಾಗಿದೆ.

ಕೊರೊನಾದಿಂದಾಗಿ ಲಕ್ಷಾಂತರ ಮಂದಿ ಅಮೆರಿಕನ್ನರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದರು. ಹೀಗಾಗಿ ಅವರ ಉದ್ಯೋಗ ರಕ್ಷಣೆಗೆ ಹಾಗೂ ಉದ್ಯೋಗದಲ್ಲಿ ಸ್ವದೇಶಿಯರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಿದೇಶಿಯರಿಗೆ ನೀಡಲಾಗುತ್ತಿದ್ದ ಗ್ರೀನ್‌ ಕಾರ್ಡ್‌ ಸೌಲಭ್ಯಕ್ಕೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ತಡೆ ನೀಡಿದ್ದರು. ಟ್ರಂಪ್‌ ಅವರು ಈ ನಿರ್ಧಾರವನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆಯನ್ನು ಗುರಿಯಾಗಿಸಿಕೊಂಡು ತೆಗೆದುಕೊಂಡಿದ್ದರು ಎನ್ನುವ ಟೀಕೆ ಕೂಡ ಕೇಳಿ ಬಂದಿತ್ತು.

ಮೊದಲು 2020ರ ಡಿಸೆಂಬರ್‌ 31ರ ವರಗೆ ಹೊಸ ಗ್ರೀನ್ ಕಾರ್ಡ್‌ ಪಡೆಯಲು ನಿರ್ಬಂಧ ಹೇರಲಾಗಿತ್ತು. ಬಳಿಕ ಅದನ್ನು ಟ್ರಂಪ್‌ 2021ರ ಮಾರ್ಚ್‌ 31 ರವರೆಗೆ ವಿಸ್ತರಿಸಿದ್ದರು. ಬಿಡೆನ್‌ ಈಗ ಅದನ್ನು ತೆಗೆದು ಹಾಕಿದ್ದಾರೆ.

ಹೊಸ ಗ್ರೀನ್‌ ಕಾರ್ಡ್‌ಗೆ ತಡೆ ನೀಡಿದ್ದರಿಂದ ಅಮೆರಿಕ ಉದ್ಯಮಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಬಿಡೆನ್ ಟ್ರಂಪ್‌ ಕಾಲದ ನಿರ್ಬಂಧವನ್ನು ಹಿಂಪಡೆದಿದ್ದಾರೆ. ಅಲ್ಲದೇ ಇದು ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಬಿಡೆನ್‌ ಅಭಿಪ್ರಾಯಪಟ್ಟಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಅವರ ಕಠಿಣ ವಲಸೆ ನೀತಿಗಳನ್ನು ತೆಗೆದು ಹಾಕುವುದಾಗಿ ಚುನಾವಣೆ ಪ್ರಚಾರದ ವೇಳೆಯಲ್ಲೇ ಬಿಡೆನ್‌ ಹೇಳಿಕೆ ನೀಡಿದ್ದರು. ಅದರಂತೆ ಇದೀಗ ಗ್ರೀನ್ ಕಾರ್ಡ್ ಮೇಲಿನ ನಿರ್ಬಂಧವನ್ನು ತೆಗೆದುಹಾಕಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: