ಪ್ರಮುಖ ಸುದ್ದಿವಿದೇಶ

ಇರಾನ್ ಬೆಂಬಲಿತ ಉಗ್ರ ತಾಣಗಳ ಮೇಲೆ ಅಮೆರಿಕ ವೈಮಾನಿಕ ದಾಳಿ

ವಾಷಿಂಗ್ಟನ್,ಫೆ.26-ಪೂರ್ವ ಸಿರಿಯಾದಲ್ಲಿನ ಇರಾನ್ ಬೆಂಬಲಿತ ಉಗ್ರಗಾಮಿ ತಾಣಗಳ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದೆ.

ಇರಾಕ್‌ನಲ್ಲಿ ಅಮೆರಿಕದ ಸೇನಾ ನೆಲೆ ಮೇಲೆ ನಡೆದಿದ್ದ ರಾಕೆಟ್ ದಾಳಿಗೆ ಪ್ರತೀಕಾರವಾಗಿ ಅಮೆರಿಕ ಮಿಲಿಟರಿಯು ವೈಮಾನಿಕ ದಾಳಿ ನಡೆಸಿದೆ. ಈ ಬಗ್ಗೆ ವಕ್ತಾರ ಜಾನ್ ಕೀರ್ಬಿಯವರು ಖಚಿತ ಪಡಿಸಿದ್ದು, ಅಧ್ಯಕ್ಷ ಬಿಡೆನ್ ಅವರ ನಿರ್ದೇಶನದ ಮೇರೆಗೆ, ಅಮೆರಿಕದ ಮಿಲಿಟರಿ ಪಡೆಗಳು ಪೂರ್ವ ಸಿರಿಯಾದಲ್ಲಿ ಇರಾನ್ ಬೆಂಬಲಿತ ಉಗ್ರಗಾಮಿ ಗುಂಪುಗಳ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದವು ಎಂದಿದ್ದಾರೆ.

ಕಟೆಬ್ ಹೆಜ್ಬೊಲ್ಲಾ ಮತ್ತು ಕಟೆಬ್ ಸಯ್ಯದ್ ಅಲ್-ಶುಹದಾ ಸೇರಿದಂತೆ ಇರಾನ್ ಬೆಂಬಲಿತ ಸಶಸ್ತ್ರ ಇರಾಕಿ ಗುಂಪುಗಳ ನಿಯಂತ್ರಣದಲ್ಲಿರುವ ಗಡಿ ನಿಯಂತ್ರಣ ಕೇಂದ್ರವು ನಮ್ಮ ಗುರಿಯಾಗಿತ್ತು ಎಂದು ಅಮೆರಿಕದ ಹೇಳಿದೆ. ಆದರೆ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿದೆಯೇ ಎಂಬ ಬಗ್ಗೆ ಅಮೆರಿಕ ಮಿಲಿಟರಿ ಮಾಹಿತಿ ನೀಡಿಲ್ಲ.

ಇಸ್ಲಾಮಿಕ್ ಸ್ಟೇಟ್ ಗುಂಪಿನಿಂದ ಅಮೆರಿಕ ಮತ್ತು ಒಕ್ಕೂಟದ ಪಡೆಗಳ ನೆಲೆ ಮೇಲೆ ನಡೆದ ಮೂರು ರಾಕೆಟ್ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆದಿದೆ. ಈ ಮಧ್ಯೆ, ಇರಾನ್‌ನ ಪರಮಾಣು ಅಭಿವೃದ್ಧಿಯನ್ನು ಸ್ಥಗಿತಗೊಳಿಸಲು ರಚಿಸಿರುವ 2015 ರ ಒಪ್ಪಂದವನ್ನು ಪುನರ್ ಸ್ಥಾಪಿಸಲು ನಾವು ಬಯಸಿದ್ದೇವೆ ಎಂದು ಬೈಡನ್ ಆಡಳಿತ ಹೇಳಿದೆ.

ಫೆಬ್ರವರಿ 15 ರಂದು ಕುರ್ದಿಷ್ ಪ್ರದೇಶದ ರಾಜಧಾನಿ ಅರ್ಬಿಲ್ನಲ್ಲಿನ ಮಿಲಿಟರಿ ಸಂಕೀರ್ಣದ ಮೇಲೆ ನಡೆದಿದ್ದ ರಾಕೆಟ್ ದಾಳಿಯಲ್ಲಿ ಒಬ್ಬ ನಾಗರಿಕ ಮತ್ತು ಮಿತ್ರ ಪಡೆಗಳೊಂದಿಗೆ ಕೆಲಸ ಮಾಡುತ್ತಿದ್ದ ವಿದೇಶಿ ಗುತ್ತಿಗೆದಾರ ಸಾವಿಗೀಡಾಗಿದ್ದರು. ದಾಳಿಯಲ್ಲಿ ಅಮೆರಿಕದ ಹಲವು ಗುತ್ತಿಗೆದಾರರು ಮತ್ತು ಒಬ್ಬ ಸೈನಿಕ ಗಾಯಗೊಂಡಿದ್ದರು. ಇರಾನ್‌ನ ನಿರ್ದೇಶನದಲ್ಲಿ ಕೆಲ ಗುಂಪುಗಳು ಇರಾಕ್‌ನಲ್ಲಿ ಅಮೆರಿಕ ಮಿಲಿಟರಿ ನೆಲೆ ಮೇಲೆ ನಡೆಸಿದ ದಾಳಿಯು ಬೈಡೆನ್ ಆಡಳಿತಕ್ಕೆ ಸವಾಲನ್ನು ಒಡ್ಡಿದೆ ಎಂದು ಇದೇ ವೇಳೆ ವಿಶ್ಲೇಷಿಸಲಾಗುತ್ತಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: