ಮೈಸೂರು

ನಿಂತಲ್ಲಿಯೇ ನಿಂತ ಲಾರಿ : ಮೈಸೂರಿನಲ್ಲಿಯೂ ಲಾರಿ ಮುಷ್ಕರಕ್ಕೆ ಬೆಂಬಲ

ಮೈಸೂರು,ಫೆ.26:- ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ದೇಶಾದ್ಯಂತ ಇಂದು ಲಾರಿ ಮುಷ್ಕರ ನಡೆದಿದ್ದು, ಮೈಸೂರು ಜಿಲ್ಲೆಯಲ್ಲಿಯೂ ಬೆಂಬಲವಾಗಿ ಲಾರಿ ಮುಷ್ಕರ ನಡೆಸಲಾಗಿದೆ.

ಜಿಲ್ಲೆಯ ಆರೂವರೆ ಸಾವಿರ ಲಾರಿ ಮಾಲೀಕರು ಮುಷ್ಕರದಲ್ಲಿ ಭಾಗವಹಿಸಿದ್ದು ಒಂದು ದಿನದ ಮಟ್ಟಿಗೆ ಲಾರಿ ನಿಂತಲ್ಲಿಯೇ ನಿಂತಿದೆ.

ದಿನೇ ದಿನೇ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು ಇಂತಹ ಪರಿಸ್ಥಿತಿಯಲ್ಲಿ ಲಾರಿಗಳ ಸಂಚಾರ ನಿತ್ಯವೂ ಹೊರೆಯಾಗುತ್ತಿದೆ. ಮೊದಲು ಸರ್ಕಾರ ಡೀಸೆಲ್ ಬೆಲೆಯನ್ನು ಇಳಿಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ. ಒಂದು ವೇಳೆ ಸರ್ಕಾರ ಇದಕ್ಕೂ ಬಗ್ಗದಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಡೀಸೆಲ್ ದರ ಹೆಚ್ಚಳ ಮಾತ್ರವಲ್ಲ. ವಾಹನ ವಿಮಾದರವನ್ನೂ ಪ್ರತಿವರ್ಷ ಹೆಚ್ಚಿಸಲಾಗುತ್ತಿದೆ. ಇದರಿಂದ ಲಾರಿ ಮಾಲೀಕರು ವಿಮಾ ಕಂತುಗಳನ್ನು ಪಾವತಿಸಲಾಗದೆ ಪರದಾಡುವ ಸ್ಥಿತಿಯಲ್ಲಿದ್ದಾರೆ. ಇದಕ್ಕೆ ಬರೆ  ಎಳೆದಂತೆ ಟೋಲ್ ದರಗಳನ್ನೂ ಹೆಚ್ಚಿಸಲಾಗಿದೆ. ಈ ಎಲ್ಲ ದರ ಏರಿಕೆಯಿಂದಾಗಿ ಲಾರಿಗಳು ನಿಂತಲ್ಲೇ ನಿಲ್ಲುವಂತಾಗಿದ್ದು, ದರ ಇಳಿಕೆ ಮಾಡದಿದ್ದಲ್ಲಿ ಲಾರಿಗಳನ್ನು ಮಾರಾಟ ಮಾಡುವ ಸ್ಥಿತಿ ತಲುಪಬಹುದೆಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ.ಕೋದಂಡ ರಾಮ, ಒಕ್ಕೂಟದ ಕಾರ್ಯದರ್ಶಿ ಪ್ರಕಾಶ್ ಎಫ್, ದಿ ಮೈಸೂರು ಸಿಟಿ ಲಾರಿ ಟ್ರಾನ್ಸ ಏಜೆಂಟ್ ಅಸೋಸಿಯೇಶನ್ ಅಧ್ಯಕ್ಷ ಸದಾಶಿವ ಎಸ್, ಕಾರ್ಯದರ್ಶಿ ಶ್ಯಾಮಸುಂದರ್, ಮೈಸೂರು-ಚಾಮರಾಜನಗರ ಲಾರಿ ಮಾಲೀಕರ ಸಂಘದ ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ವೆಂಕಟೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: