ದೇಶಪ್ರಮುಖ ಸುದ್ದಿ

ಬಿಜೆಪಿಗೆ ತಡೆಯೊಡ್ಡಲು ಪ್ರತಿಪಕ್ಷಗಳ ತಂತ್ರ ; ಸೋನಿಯಾ ಜಾಗಕ್ಕೆ ಮಮತಾ!

ಬಿಜೆಪಿ ನಾಗಾಲೋಟವನ್ನು ತಡೆಯಲು ಕಾಂಗ್ರೆಸ್ ನೇತೃತ್ವದಲ್ಲಿ ಮಹಾಘಟಬಂಧನ್ ಮಾತು ಕೇಳಿ ಬರುತ್ತಿದ್ದಂತೆಯೇ ಮತ್ತೊಂದು ಅಚ್ಚರಿಯ ಬೆಳ್ವಣಿಗೆ ರಾಷ್ಟ್ರ ರಾಜಕಾರಣದಲ್ಲಿ ಕೇಳಿಬರುತ್ತಿದೆ.

ಮಮತಾ ನೇತೃತ್ವದ ತೃಣಮೂಲ ಕಾಂಗ್ರೆಸ್, ಜಗನ್ ಅವರ ವೈ.ಎಸ್.ಆರ್. ಕಾಂಗ್ರೆಸ್, ಶರದ್ ಪವಾರ್ ನೇತೃತ್ವದ ಎನ್ಸಿಪಿ ಅಲ್ಲದೆ ತಮಿಳ್ ಮನಿಲ ಕಾಂಗ್ರೆಸ್, ಮಣಿಪುರ್ ಕಾಂಗ್ರೆಸ್ — ಹೀಗೆ ವಿವಿಧ ಕಾರಣಗಳಿಂದ ಒಡೆದುಹೋದ ಕಾಂಗ್ರೆಸ್ ನಾಯಕರನ್ನು ಒಂದುಗೂಡಿಸುವ ಮಹತ್ವದ ಕೆಲಸಕ್ಕೆ ಸೋನಿಯಾ ಗಾಂಧಿ ಮುಂದಾಗಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಇರುವ ಪ್ರಾದೇಶಿಕ ಪಕ್ಷಗಳನ್ನು ಕಾಂಗ್ರೆಸ್ ಇಲ್ಲವೇ ಜನತಾ ಪರಿವಾರದಿಂದ ದೂರವಾದ ನಾಯಕರುಗಳು ಮುನ್ನಡೆಸುತ್ತಿದ್ದಾರೆ.

ಕೇರಳ ಕಾಂಗ್ರೆಸ್ ನಾಯಕ ಕೆ.ವಿ.ಥಾಮಸ್ ಅವರನ್ನು ಈ ಕೆಲಸಕ್ಕೆ ಸೋನಿಯಾ ನೇಮಿಸಿದ್ದಾರೆ. ಸಿಡಿದುಹೋಗಿರುವ ಈ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತರುವ ಉಪಾಯ ಮಾಡಿದ್ದು, ಈ ಪಕ್ಷಗಳನ್ನು ಕಾಂಗ್ರೆಸ್‍ನಲ್ಲಿ ವಿಲೀನ ಗೊಳಿಸುವ ಪ್ರಯತ್ನ ನಡೆದಿದೆ.

ಇಂಥಹ ಕಠಿಣವಾದ ಈ ಕೆಲಸಕ್ಕೆ ಸೋನಿಯಾ ಗಾಂಧಿ ತ್ಯಾಗಕ್ಕೂ ಮುಂದಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಮಮತಾ ಬ್ಯಾನರ್ಜಿ ಅವರಿಗೆ ವಹಿಸಿಕೊಡುವ ಯೋಚನೆ ಇದಾಗಿದೆ ಎನ್ನಲಾಗಿದೆ. ಸೋನಿಯಾ ವಿದೇಶಿ ಮೂಲವನ್ನು ನೆಪಮಾಡಿಕೊಂಡು ಕಾಂಗ್ರೆಸ್‍ನಿಂದ ಹೊರಹೋಗಿದ್ದ ಶರತ್ ಪವಾರ್ ಅವರಿಗೂ ಇದರಿಂದ ಸಮಾಧಾನವಾಗಲಿದೆ ಎನ್ನುವ ತರ್ಕ ಇದರ ಹಿಂದಿದೆ.

ತಮ್ಮ ತಂದೆಯ ಅಕಾಲಿಕ ನಿಧನಾನಂತರ ಮುಖ್ಯಮಂತ್ರಿಯಾಗುವ ಇರಾದೆ ಹೊಂದಿದ್ದ ಜಗನ್ಮೋಹನ ರೆಡ್ಡಿ ಕಾಂಗ್ರೆಸ್ ಜೊತೆ ಮುನಿಸಿಕೊಂಡು ವೈಎಸ್‍ಆರ್ ಕಾಂಗ್ರೆಸ್ ರಚಿಸಿ ಚಂದ್ರಬಾಬು ನಾಯ್ಡು ವಿರುದ್ಧ ಸೆಣಸಾಡುತ್ತಿದ್ದಾರೆ. ಆದರೆ ನಿರೀಕ್ಷಿತ ಫಲಿತಾಂಶ ಕಾಣದ ಜಗನ್, ಕಾಂಗ್ರೆಸ್ ಸೇರುವ ಕುರಿತು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಘನಬಲದ ಬಿಜೆಪಿ ವಿರುದ್ಧ ಸೆಣಸಲು ಮತ ಹಂಚಿಕೆಯನ್ನು ತಡೆಯುವುದು ಪ್ರಾದೇಶಿಕ ಪಕ್ಷಗಳು ಸೇರಿದಂತೆ ಕಾಂಗ್ರೆಸ್ಸಿಗೂ ಅನಿವಾರ್ಯ. ಕಾಂಗ್ರೆಸ್‍ನಲ್ಲಿ ವಿಲೀನವಾಗುವ ಆಯಾ ಪ್ರಾದೇಶಿಕ ನಾಯಕರುಗಳಿಗೆ ಕಾಂಗ್ರೆಸ್ ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಡುವುದು ಮತ್ತು ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನವನ್ನು ಕೊಡುವುದು ಕೂಡ ಒಪ್ಪಂದದಲ್ಲಿ ಸೇರಿದೆ ಎನ್ನಲಾಗಿದೆ.

ಪ್ರಿಯಾಂಕ ಅವರನ್ನು ಮುಂಚೂಣಿಗೆ ತಂದು ಜನಾಕರ್ಷಣೆ ಮಾಡುವುದು ಕೂಡ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಒಂದು. ಜನರನ್ನು ಸೆಳೆಯಲು ರಾಹುಲ್ ವಿಫಲವಾದ ಹಿನ್ನೆಲೆಯಲ್ಲಿ ಪ್ರಿಯಾಂಕಾ ಅವರನ್ನು ಕೆರೆತರಬೇಕೆಂಬುದು ರಾಜ್ಯ ಮಟ್ಟದ ಈ ನಾಯಕರ ಬೇಡಿಕೆಯು ಆಗಿದೆ.

ಮೋದಿಗೆ ಸಂವಾದಿಯಾಗಿ ಪ್ರಿಯಾಂಕಾ ಅವರನ್ನು ಜನರಮುಂದೆ ನಿಲ್ಲಿಸಲು ಕಾಂಗ್ರೆಸ್ ಕಾರ್ಯಕರ್ತರೇ ಉತ್ಸುಕರಾಗಿದ್ದಾರೆ. ಮೋದಿ ನಂತರ ಬಿಜೆಪಿಯಲ್ಲಿ ನಾಯಕರ ಕೊರತೆಯಿಂದ ಉಂಟಾಗುವ ಲಾಭವನ್ನು ಈ ಮೂಲಕ ಕಾಂಗ್ರೆಸ್ ಪಡೆಯ ಬಹುದಾಗಿದೆ.
ಇನ್ನು ಜನತಾ ಪರಿವಾರದ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಮತ ವಿಭಜನೆ ತಡೆದು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬಹುದು ಪೂರಕ ಲೆಕ್ಕಾಚಾರ. ಬಿಹಾರ್ ಇದಕ್ಕೆ ಸಾಕ್ಷಿ. ಒಡಿಶಾದ ಬಿಜೆಡಿ ನಾಯಕ ನವೀನ್ ಪಾಟ್ನಾಯಕ್ ಈಗಾಗಲೇ ಬಿಜೆಪಿಯಿಂದ ಪ್ರಬಲ ಪೈಪೋಟಿ ಎದುರಿಸುತ್ತಿದ್ದಾರೆ. ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಜೊತೆ ಮೈತ್ರಿ ಏರ್ಪಟ್ಟರೆ ಲಾಭವೇ ಹೊರತು ಕೆಳೆದುಕೊಳ್ಳುವುದೇನಿಲ್ಲ.
ಕರ್ನಾಟಕದಲ್ಲಿ ಜೆಡಿಎಸ್ ಎಷ್ಟು ದಿನ ಅಧಿಕಾರದಿಂದ ದೂರ ಇರಲು ಸಾಧ್ಯ ಎನ್ನುವ ತೀರ್ಮಾನಕ್ಕೆ ಬಂದಂತಿದೆ. ಕಾಂಗ್ರೆಸ್ ಜೆತೆ ಮೈತ್ರಿ ಮಾಡಿಕೊಂಡು ಸರ್ಕಾರ ಮಾಡಿ ಚಾಲ್ತಿಯಲ್ಲಿರುವುದು ಕಾರ್ಯಕರ್ತರು ಮತ್ತು ಗೌಡರ ಅಭಿಪ್ರಾಯ ಎನ್ನಲಾಗಿದೆ. ಅಖಿಲೇಶ್ ಯಾದವ್ ಅವರಂತೂ ಕಾಂಗ್ರೆಸ್ ಮೈತ್ರಿಯಲ್ಲಿದ್ದಾರೆ. ಬಿಎಸ್ಪಿ ನಾಯಕಿ ಮಾಯಾವತಿಯವರು ಅಧಿಕಾರ ಕಳೆದುಕೊಂಡು ಪರಿತಪಿಸುತ್ತಿದ್ದಾರೆ. ಮಹಾಮೈತ್ರಿಗೆ ಅವರು ಬಹಿರಂಗವಾಗಿ ಒಪ್ಪಿಗೆ ನೀಡಿಯಾಗಿದೆ.

ಯೋಗಿ ಆದಿತ್ಯನಾಥ್ ಅವರ ರಾಜೀನಾಮೆಯಿಂದ ತೆರವಾದ ಗೋರಖ್‍ಪುರ ಲೋಕಸಭಾ ಚುನಾವಣೆಲ್ಲಿ ಈ ಮೈತ್ರಿಯ ಮೊದಲ ಪ್ರಯೋಗ ನಡೆಯಲಿದೆ. 2019ರ ಮಹಾ ಚುನಾವಣೆಗೆ ಸಾಕಷ್ಟು ಮೊದಲೇ ಈ ವಿಲೀನ ಮತ್ತು ಹೊಂದಾಣಿಕೆ ರಾಜಕೀಯ ಬೆಳವಣಿಗೆ ನಡೆಯಲಿವೆ ಎನ್ನ ಲಾಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಚಲಾವಣೆಯಾದ ಶೇಕಡಾ 31 ರಷ್ಟು ಮತಗಳನ್ನು ಮಾತ್ರ ಪಡೆದ ಬಿಜೆಪಿ ಅತಿ ಹೆಚ್ಚು ಲೋಕಸಭಾ ಸ್ಥಾನಗಳಲ್ಲಿ ಜಯಗಳಿಸಿ ಅಧಿಕಾರಕ್ಕೇರಿತ್ತು. ಆದರೆ ಉಳಿದ ಶೇಕಡಾ 69 ರಷ್ಟು ಜನ ಬಿಜೆಪಿಯನ್ನು ತಿರಸ್ಕರಿಸಿದ್ದರು.

ಈ ಕಾರಣದಿಂದ ಶೇಕಡಾವಾರು ಮತ ಲೆಕ್ಕಾಚಾರವಾಗಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುವುದು ಸಾಧ್ಯವಿರಲಿಲ್ಲ. ಮಹಾಮೈತ್ರಿಯ ಮೂಲಕ ಈ 69 ಶೇಕಡಾ ಮತಗಳನ್ನು ಒಟ್ಟುಗೂಡಿಸಲು ಪ್ರಯತ್ನಿಸಿ ಹೆಚ್ಚು ಸ್ಥಾನಗಳನ್ನು ಗಳಿಸಬಹುದು ಎಂಬುದು ಪ್ರತಿಪಕ್ಷಗಳ ಲೆಕ್ಕಾಚಾರ.

ಒಟ್ಟಾರೆ ಮುಂಬರುವ ಚುನಾವಣೆಯಲ್ಲಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಬಿರುಸಿನ ತಯಾರಿ ನಡೆಸಿದೆ. ಅಧಿಕಾರ ಕಂಡಾಕ್ಷಣ ತಕ್ಕಡಿಗೆ ಹಾಕಿದ ಕಪ್ಪೆಯಂತಾಡುವ ರಾಜಕೀಯ ನಾಯಕರು ಈ ಮೈತ್ರಿಯನ್ನು ಸಾಧ್ಯವಾಗಿಸುವರೇ? ಸಾಧ್ಯವಾದರೂ ಮೈತ್ರಿ ಯಶಸ್ಸು ಕಾಣುವುದೇ ಎಂಬ ಪ್ರಶ್ನೆಗೆ ಕಾಲಾಯ ತಸ್ಮೈ ನಮಃ ಎನ್ನುವುದೇ ಸದ್ಯದ ಉತ್ತರವಾಗಿದೆ.

(ವಿ.ಎಸ್.ಎನ್)

Leave a Reply

comments

Related Articles

error: