
ಕರ್ನಾಟಕಪ್ರಮುಖ ಸುದ್ದಿ
ಮಂಗಳೂರು ಐಷಾರಾಮಿ ಕಾರು ಮಾರಾಟ ಪ್ರಕರಣ: ಮತ್ತಿಬ್ಬರು ಪೊಲೀಸರ ಅಮಾನತು
ಮಂಗಳೂರು,ಮಾ.2-ವಂಚನೆ ಪ್ರಕರಣದ ಆರೋಪಿಗಳ ಐಷಾರಾಮಿ ಕಾರನ್ನು ಮಂಗಳೂರು ಸಿಸಿಬಿ ಪೊಲೀಸರು ಮಾರಾಟ ಮಾಡಿದ ಪ್ರಕರಣದ ಆರೋಪದಲ್ಲಿ ಮತ್ತಿಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಈ ಮೂಲಕ ಪ್ರಕರಣದಲ್ಲಿ ಅಮಾನತುಗೊಂಡವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಪ್ರಕರಣದಲ್ಲಿ ನಾರ್ಕೋಟಿಕ್ ಆ್ಯಂಡ್ ಎಕಾನಮಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಮಕೃಷ್ಣ ಮತ್ತು ಪ್ರಸ್ತುತ ಚಿಕ್ಕಮಗಳೂರು ಡಿಸಿಆರ್ಬಿ ಎಸ್ಐ ಕಬ್ಬಾಳ್ರಾಜ್ ಅವರನ್ನು ಫೆ.27ರಂದು ಅಮಾನತುಗೊಳಿಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಆದೇಶ ಮಾಡಿದ್ದರು. ಈ ಆದೇಶದ ಆಧಾರದಲ್ಲೇ ಮಂಗಳೂರು ಪೊಲೀಸ್ ಕಮಿನಷರ್ ಎನ್. ಶಶಿಕುಮಾರ್ ಅವರು ಕಳಂಕಿತರಾದ ಆಶಿತ್ ಡಿಸೋಜ ಮತ್ತು ರಾಜಾ ಎಂಬವರನ್ನು ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ.
ಅಮಾನತುಗೊಂಡ ಆರೋಪಿಗಳು ಕಾರು ಮಾರಾಟದಲ್ಲಿ ಭಾಗಿಯಾಗಿರುವ ಬಗ್ಗೆ ಮಂಗಳೂರು ನಗರ ಡಿಸಿಪಿ ವಿನಯ್ ಗಾಂವ್ಕರ್ ನೀಡಿದ ಆಂತರಿಕ ತನಿಖಾ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಆದೇಶ ಮಾಡಲಾಗಿದೆ.
ಅಮಾನತುಗೊಂಡ ಆರೋಪಿಗಳಾದ ಕಬ್ಬಾಳ್ರಾಜ್, ರಾಮಕೃಷ್ಣ, ಆಶಿತ್ ಡಿಸೋಜ, ರಾಜಾ ಹಾಗೂ ಮಧ್ಯವರ್ತಿ ದಿವ್ಯ ದರ್ಶನ್ಗೆ ರಾಜ್ಯ ಸಿಐಡಿ(ಕೇಂದ್ರ ತನಿಖಾ ದಳ) ನೋಟಿಸ್ ನೀಡಿದ್ದು, ನಾಲ್ವರು ವಿಚಾರಣೆಗಾಗಿ ಬೆಂಗಳೂರು ಸಿಐಡಿ ಕಚೇರಿಗೆ ತೆರಳಬೇಕಿದೆ.
ಕಾರು ಮಾರಾಟ ಪ್ರಕರಣದ ತನಿಖಾಧಿಕಾರಿ ಸಿಐಡಿ ಡಿಎಸ್ಪಿ ರೋಹಿಣಿ ಕಟೋಚ್ ನೇತೃತ್ವದ ತಂಡ ಇಂದು ಮಂಗಳೂರಿಗೆ ಆಗಮಿಸಿ ತನಿಖೆ ನಡೆಸುವ ಸಾಧ್ಯತೆಯಿದೆ. ಬಳಿಕ ತನಿಖಾಧಿಕಾರಿ ಸಮಗ್ರ ವರದಿಯನ್ನು ಸಿಐಡಿ ಡಿಜಿಗೆ ಸಲ್ಲಿಸಲಿದ್ದು, ಅದನ್ನು ರಾಜ್ಯ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಸಲ್ಲಿಕೆಯಾಗಲಿದೆ. (ಎಂ.ಎನ್)