Uncategorized

ದೆಹಲಿ ಸ್ಥಳೀಯ ಸಂಸ್ಥೆ ಉಪ ಚುನಾವಣೆ: ಎಎಪಿಗೆ 4 ಸ್ಥಾನಗಳಲ್ಲಿ ಭರ್ಜರಿ ಗೆಲುವು

ನವದೆಹಲಿ,ಮಾ.3-ದೆಹಲಿ ಪುರಸಭೆ ಉಪಚುನಾವಣೆಯಲ್ಲಿ ಆಡಳಿತ ಪಕ್ಷವಾದ ಆಮ್​ ಆದ್ಮಿ ಪಕ್ಷ ಜಯಭೇರಿ ಬಾರಿಸಿದೆ. ಐದರಲ್ಲಿ ನಾಲ್ಕು ಸ್ಥಾನದಲ್ಲಿ ಎಎಪಿ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ. ಕಾಂಗ್ರೆಸ್​ ಒಂದು ಸ್ಥಾನದಲ್ಲಿ ಗೆದ್ದು ನಿಟ್ಟುಸಿರು ಬಿಟ್ಟಿದೆ.

ದೆಹಲಿಯ ಶಾಲಿಮಾರ್‌ ಬಾಗ್‌ ನಾರ್ತ್, ಕಲ್ಯಾಣ್‌ಪುರಿ, ತ್ರಿಲೋಕ್‌ಪುರಿ ಮತ್ತು ರೋಹಿಣಿ- ಸಿ ವಾರ್ಡ್‌ ಮತ್ತು ಚೌಹಾಣ್ ಬಂಗಾರ್‌ ನಲ್ಲಿ ಫೆ.28ರಂದು ಉಪಚುನಾವಣೆ ನಡೆದಿತ್ತು. ಶೇ. 50 ಮತದಾರರು ಮತ ಚಲಾಯಿಸಿದ್ದರು.

ಇದರಲ್ಲಿ ಶಾಲಿಮಾರ್ ಬಾಗ್ ನಾರ್ತ್, ಕಲ್ಯಾಣ್‌ಪುರಿ, ತ್ರಿಲೋಕ್‌ಪುರಿ ಮತ್ತು ರೋಹಿಣಿ- ಸಿ ವಾರ್ಡ್‌ಗಳಲ್ಲಿ ಎಎಪಿ ಗೆಲುವಿನ ನಗೆ ಬೀರಿದೆ. ಶಾಲಿಮಾರ್ ಬಾಗ್ ನಾರ್ತ್​ನಲ್ಲಿ ಈ ಹಿಂದೆ ಬಿಜೆಪಿಯ ಕೌನ್ಸಿಲರ್​ ಇದ್ದು, ಇದೀಗ ಆ ಸ್ಥಾನವನ್ನು ಪಕ್ಷ ಎಎಪಿಗೆ ಬಿಟ್ಟುಕೊಟ್ಟಿದೆ. ಚೌಹಾಣ್ ಬಂಗಾರ್‌ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದು ಬೀಗಿದ್ದಾರೆ.

ಈ ಬಗ್ಗೆ ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಾತನಾಡಿ, ದೆಹಲಿ ಪುರಸಭೆ ಉಪ ಚುನಾವಣಾ ಫಲಿತಾಂಶ ಮುಂಬರುವ 2022ರ ದೆಹಲಿ ಪಾಲಿಕೆ ಚುನಾವಣೆಯ ದಿಕ್ಸೂಚಿ ಎಂದಿದ್ದಾರೆ.

ದೆಹಲಿಯ ಜನರು ನಮ್ಮ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಬಿಜೆಪಿಯಿಂದ ಬೇಸರಗೊಂಡಿದ್ದಾರೆ ಮತ್ತು ಈ ಚುನಾವಣೆಯು ಅದರ ಸೂಚನೆಯಾಗಿದೆ. 2022ರ ದೆಹಲಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಳಿಸಿಹಾಕಲಾಗುವುದು ಎಂದು ಹೇಳಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: