ಮೈಸೂರು

ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಶ್ರವಣ ಆರೋಗ್ಯ ಉತ್ತಮವಾಗಿರಬೇಕು: ಕೆ.ಪದ್ಮಾ

ಮೈಸೂರು,ಮಾ .3:-ಮನುಷ್ಯರಲ್ಲಿ ಶ್ರವಣ ಶಕ್ತಿ ಎಂಬುದು ಪಂಚೇಂದ್ರಿಯಗಳಲ್ಲಿ ಒಂದಾಗಿದ್ದು, ದೇಹದ ಬಹುಮುಖ್ಯ ಭಾಗವಾಗಿದೆ. ಯಾರೇ ಇರಲಿ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕಾದರೆ ಅವರ ಶ್ರವಣ ಆರೋಗ್ಯ ಉತ್ತಮವಾಗಿರಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಕೆ.ಪದ್ಮಾ ಅವರು ಹೇಳಿದರು.
ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಶ್ವ ಶ್ರವಣ ದಿನಾಚರಣೆ ಕುರಿತು ಬುಧವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಜನಿಸುತ್ತಿರುವ ಮಕ್ಕಳಲ್ಲಿ ಶೇ. 2ರಷ್ಟು ಶ್ರವಣ ದೋಷ ಕಂಡುಬರುತ್ತಿದೆ ಎಂದು ಮಾಹಿತಿ ನೀಡಿದರು.ಮಹಿಳೆಯರು ಸಕಾಲದಲ್ಲಿ ಮದುವೆ ಆಗದಿರುವುದು, ಗರ್ಭಿಣಿಯರಿರುವಾಗ ಸರಿಯಾಗಿ ಆರೈಕೆ ಮಾಡಿಕೊಳ್ಳದಿರುವುದು, ಹುಟ್ಟುವ ಮಕ್ಕಳಿಗೆ ಜಾಂಡೀಸ್ ಕಾಯಿಲೆ ಬಾಧಿಸುವುದರಿಂದ ಶ್ರವಣ ದೋಷಕ್ಕೆ ಕಾರಣವೆಂದು ಈ ಕುರಿತ ಅಧ್ಯಯನಗಳು ಹೇಳುತ್ತವೆ. ಆಗ ತಾನೇ ಜನಿಸುವ ಮಕ್ಕಳಲ್ಲಿ ಶ್ರವಣ ದೋಷ ಇರುವುದನ್ನು ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಶ್ರವಣ ದೋಷ ನಿವಾರಿಸಲು ಸಾಧ್ಯವಿದೆ ಎಂದರುಮೈಸೂರು ನಗರದಲ್ಲಿ ಶ್ರವಣ ದೋಷಕ್ಕೆ ಸೂಕ್ತ ಚಿಕಿತ್ಸೆ ನೀಡಲು ವಾಕ್ ಶ್ರವಣ ಸಂಸ್ಥೆ, ಜೆ.ಎಸ್.ಎಸ್. ಆಸ್ಪತ್ರೆ ಹಾಗೂ ನಮ್ಮ ಜಿಲ್ಲಾ ಶ್ರವಣ ದೋಷ ನಿವಾರಣಾ ಕೇಂದ್ರಗಳಿವೆ. ಶ್ರವಣ ದೋಷವಿರುವ ಮಕ್ಕಳ ಪೋಷಕರು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನವಜಾತ ಮಕ್ಕಳಲ್ಲಿ ಶ್ರವಣ ಪರೀಕ್ಷೆ ಮಾಡಿ ಮೂರು ತಿಂಗಳ ಒಳಗಾಗಿ ಆ ಮಕ್ಕಳಿಗೆ ಶ್ರವಣ ಶಕ್ತಿ ಸಾಧನವನ್ನು ಅಳವಡಿಸಿದರೆ ಮುಂದೆ ಅವರು ಈ ದೋಷದಿಂದ ಮುಕ್ತರಾಗುವ ಸಾಧ್ಯತೆ ಇದೆ. ಅಲ್ಲದೆ ಇತ್ತೀಚಿನ ವರದಿಗಳ ಪ್ರಕಾರ ಶಬ್ದ ಮಾಲಿನ್ಯ ಕೂಡ ಶ್ರವಣ ಶಕ್ತಿ ಸಾಮಥ್ರ್ಯ ಕುಗ್ಗಿಸುತ್ತದೆ. ಹಾಗಾಗಿ ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪೋಷಕರು ಇಂತಹ ವಿಚಾರಗಳಲ್ಲಿ ಹೆಚ್ಚು ಜವಾಬ್ದಾರಿನಿರ್ವಹಿಸಬೇಕಾಗುತ್ತದೆ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಡಾ.ಗುರುಮೂರ್ತಿ ಅವರು ಮಾತನಾಡಿ, ಶ್ರವಣ ದೋಷ ನಮ್ಮ ದೇಶದ ವಿಶೇಷ ಸಮಸ್ಯೆಯೇ ಅಲ್ಲ. ಶ್ರವಣ ದೋಷ ಪತ್ತೆ ಹಾಗೂ ಅದಕ್ಕೆ ಪರಿಹಾರ ರೂಪಿಸುವಲ್ಲಿ ಹೊಸ ತಂತ್ರಜ್ಞಾನಗಳ ಆವಿಷ್ಕಾರಗಳು ಯಶಸ್ವಿಯಾಗಿವೆ. ಆದರೆ ಶ್ರವಣ ದೋಷ ಇರುವುದನ್ನು ಸಹಜವಾಗಿ ಯಾರೂ ಒಪ್ಪಿಕೊಳ್ಳುವುದಿಲ್ಲ. ಕಿವುಡರೆಂದು ಮೂದಲಿಸುತ್ತಾರೆ ಎಂಬ ಕಾರಣಕ್ಕೆ ಸಂಕೋಚ ಮಾಡುತ್ತಾರೆ ಎಂದು ತಿಳಿಸಿದರು.ಶ್ರವಣ ದೋಷವುಳ್ಳವರು ಮೊದಲು ಇಂತಹ ಸಂಕೋಚ ಬಿಡಬೇಕು. ಇದಕ್ಕಾಗಿಯೇ ಸಿದ್ಧ್ದಪಡಿಸಿದ ಶ್ರವಣ ಸಾಧನ ಹಾಕಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಶ್ರವಣ ದೋಷವಿದ್ದವರು ಸಾಧನ ಖರೀದಿಸಿದರೂ ಅದನ್ನು ಕಾಸ್ಮೆಟಿಕ್ ವಸ್ತುವಿನಂತೆ ನೋಡುತ್ತಾರೆ. ಅದನ್ನು ಕಿವಿಗೆ ಅಳವಡಿಸಿಕೊಳ್ಳುವುದರಿಂದ ಶ್ರವಣ ದೋಷವಿದೆಯೆಂದು ತಿಳಿಯುತ್ತದೆ ಎಂಬ ಸಂಕೋಚ ಅನುಭವಿಸುತ್ತಾರೆ. ಇಂತಹ ಸಂಕೋಚದಿಂದ ಹೊರಬಂದರೆ ಮಾತ್ರ ಶ್ರವಣ ದೋಷ ಕೊರತೆಯನ್ನು ನಿವಾರಿಸಿಕೊಳ್ಳಬಹುದು ಎಂದು ಹೇಳಿದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಎಚ್.ಡಿ.ಕೋಟೆ ತಾಲ್ಲೂಕು ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ದಿವಾಕರ್ ಅವರು ಮಾತನಾಡಿ, ಜಗತ್ತಿನಲ್ಲಿ 466 ಮಿಲಿಯನ್ ಜನ ಈ ಶ್ರವಣ ದೋಷದಿಂದ ಬಳಲುತ್ತಿದ್ದಾರೆ. ಈ ಪೈಕಿ 32 ಮಿಲಿಯನ್ ಮಕ್ಕಳು ಈ ಸಮಸ್ಯೆಗೆ ತುತ್ತಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ವಯ ಮಾರ್ಚ್ 3ರಂದು ಈ ಶ್ರವಣ ದಿನವನ್ನು ಆಚರಿಸುತ್ತಿದ್ದೇವೆ. ಎಲ್ಲರಿಗೂ ಶ್ರವಣ ಶಕ್ತಿ ದೊರೆಯಬೇಕೆಂಬ ಧ್ಯೇಯ ವಾಕ್ಯವನ್ನು ಈ ದಿನಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಹೊರಡಿಸಿದೆ. ಅಲ್ಲದೆ ಇದಕ್ಕಾಗಿ ವಿಶ್ವದ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳು, ಸರ್ಕಾರಗಳ ಸಹಾಯದೊಂದಿಗೆ ಶ್ರವಣ ದೋಷ ನಿವಾರಣೆಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್.ಮಾಲಿನಿ, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಕಾರ್ಯದರ್ಶಿ ಮಹಾದೇವಪ್ಪ, ಭಾರತ ರೆಡ್ ಕ್ರಾಸ್ ಸಂಸ್ಥೆಯ ಆಡಳಿತಮಂಡಳಿ ಸದಸ್ಯರಾದ ಸುಧಾ, ಅಂಗವಿಕಲರ ಪುನರ್ವಸತಿ ಕೇಂದ್ರದ ನೋಡೆಲ್ ಅಧಿಕಾರಿ ಅರ್ಜುನ್ ಅವರು ಉಪಸ್ಥಿತರಿದ್ದರು.

Leave a Reply

comments

Related Articles

error: