
ಮೈಸೂರು
‘ಆಶುತೋಷ್ ಮುಖರ್ಜಿ ಫೆಲೋಶಿಪ್ 2021-22’ ಪ್ರಶಸ್ತಿಗೆ ಪ್ರೊ.ಕೆ.ಎಸ್.ರಂಗಪ್ಪ ಭಾಜನ
ಮೈಸೂರು,ಮಾ.4:- ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ಅವರು ಐಎಸ್ ಸಿಎ, ಕೋಲ್ಕತ್ತಾದ ವತಿಯಿಂದ ನೀಡುವ ಪ್ರತಿಷ್ಠಿತ ‘ಆಶುತೋಷ್ ಮುಖರ್ಜಿ ಫೆಲೋಶಿಪ್ 2021-22’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರೊ. ಕೆ.ಎಸ್. ರಂಗಪ್ಪ ಅವರು ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಹಾಗೂ ಸಾಧನೆಗಳನ್ನು ಪರಿಗಣಿಸಿ ಅವರಿಗೆ ಈ ಪ್ರತಿಷ್ಠಿತ ಗೌರವವನ್ನು ನೀಡಲಾಗುತ್ತಿದೆ. ಈ ಫೆಲೋಶಿಪ್ ಮೂರು ವರ್ಷಗಳ ಕಾಲ ವಾರ್ಷಿಕ 3,00,000 ರೂ. ಗೌರವಧನವನ್ನು ಒಳಗೊಂಡಿದೆ.
ಪ್ರೊ. ಕೆ.ಎಸ್. ರಂಗಪ್ಪ ಅವರು ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್ ನ (ಐಎಸ್ಸಿಎ) ಹಿಂದಿನ ಅಧ್ಯಕ್ಷರೂ ಕೂಡ ಹೌದು. ಐಎಸ್ ಎಸಿ ತನ್ನ ಆಜೀವ ಸದಸ್ಯರ ಸೇವೆಯನ್ನು ಪಡೆಯುವ ಸಲುವಾಗಿ ‘ಆಶುತೋಷ್ ಮುಖರ್ಜಿ ಫೆಲೋಶಿಪ್’ ಹೆಸರಿನಲ್ಲಿ ಹತ್ತು ಹಿರಿಯ ಫೆಲೋಶಿಪ್ ಗಳನ್ನು ರಚಿಸಿದೆ. (ಕೆ.ಎಸ್,ಎಸ್.ಎಚ್)