ಪ್ರಮುಖ ಸುದ್ದಿವಿದೇಶ

ಟರ್ಕಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನ: ಲೆಫ್ಟಿನೆಂಟ್ ಜನರಲ್ ಸೇರಿ 11 ಮಂದಿ ಸಾವು

ಅಂಕಾರಾ,ಮಾ.5- ಟರ್ಕಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡು ಲೆಫ್ಟಿನೆಂಟ್ ಜನರಲ್ ಸೇರಿ 11 ಮಂದಿ ಮೃತಪಟ್ಟಿದ್ದಾರೆ.

ಕರಾವಳಿ ಪ್ರದೇಶಗಳಲ್ಲಿ ಬಳಕೆಯಾಗುವ ಕೂಗರ್ ರೀತಿಯ ಹೆಲಿಕಾಪ್ಟರ್ ತತ್ವಾನ್ ಪಟ್ಟಣದ ಸಮೀಪ ಪತನಗೊಂಡಿದೆ. ಪತನ ಸ್ಥಳದಲ್ಲಿಯೇ 9 ಮಂದಿ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸೇನೆಯ ಲೆಫ್ಟೆನೆಂಟ್ ಜನರಲ್ ಉಸ್ಮಾನ್ ಎರ್ಬಾಸ್ ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಕರ್ಡಿಶ್ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಬಿಟ್ಲಸ್ ಪ್ರಾಂತ್ಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಬಿಂಗಾಲ್ ಪ್ರದೇಶದಿಂದ ಹಾರಾಟ ಆರಂಭಿಸಿದ್ದ ಹೆಲಿಕಾಪ್ಟರ್ ಮಧ್ಯಾಹ್ನ 2.25ಕ್ಕೆ ಸಂಪರ್ಕ ಕಳೆದುಕೊಂಡಿತ್ತು. ಬಳಿಕ ಹೆಲಿಕಾಪ್ಟರ್ ಪತನಗೊಂಡಿರುವುದು ತಿಳಿದುಬಂದಿದೆ.

ಸ್ಥಳೀಯರು ಹೆಲಿಕಾಪ್ಟರ್ ಪತನಗೊಂಡ ಸ್ಥಳಕ್ಕೆ ಧಾವಿಸಿ, ಗಾಯಗೊಂಡಿದ್ದ ಸೇನಾ ಸಿಬ್ಬಂದಿಯನ್ನು ಹಿಮದ ರಾಶಿಯಿಂದ ಮೇಲಕ್ಕೆತ್ತಿದ್ದಾರೆ. ಟರ್ಕಿಯ ರಕ್ಷಣಾ ಸಚಿವ ಹುಲುಸಿ ಆಕರ್ ಮತ್ತು ಸೇನಾ ಮುಖ್ಯಸ್ಥ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಿಮ ಸೇರಿದಂತೆ ಹಲವು ಹವಾಮಾನ ವೈಪರೀತ್ಯ ಕಾರಣದಿಂದ ಪತನ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನಿಷೇಧಿತ ಕರ್ಡಿಸ್ಥಾನ್ ವರ್ಕರ್ಸ್ ಪಾರ್ಟಿಯ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಪ್ರದೇಶದಲ್ಲಿಯೇ ಹೆಲಿಕಾಪ್ಟರ್ ಪತನವಾಗಿದೆ. 1984ರಿಂದ ಉಗ್ರರು ಮತ್ತು ಸೇನೆಯ ನಡುವಿನ ಘರ್ಷಣೆಯು ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಂಡಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: