ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಕೃಷಿ ಇಲಾಖೆಯ ರಾಯಭಾರಿಯಾಗಿ ನಟ ದರ್ಶನ್ ನೇಮಕ

ಬೆಂಗಳೂರು,ಮಾ.5-ರಾಜ್ಯ ಕೃಷಿ ಇಲಾಖೆಯ ನೂತನ ರಾಯಭಾರಿಯಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಧಿಕಾರ ಸ್ವೀಕರಿಸಿದರು.

ಇಂದು ವಿಕಾಸಸೌಧದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ದರ್ಶನ್ ಅವರಿಗೆ ಹಸಿರು ಶಾಲ್ ಹೊದಿಸಿ ಅಧಿಕೃತವಾಗಿ ಕೃಷಿ ಇಲಾಖೆಯ ನೂತನ ರಾಯಭಾರಿಯಾಗಿ ನೇಮಿಸಿದರು.

ಈ ವೇಳೆ ಮಾತನಾಡಿದ ಸಿಎಂ ಬಿಎಸ್ವೈ ಅವರು, ಚಲನಚಿತ್ರ ರಂಗದಲ್ಲಿ‌ ಎತ್ತರಕ್ಕೆ ಬೆಳೆದಿರುವ ಚಿತ್ರ ನಟ ದರ್ಶನ್ ನಟನೆಯ ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ. ಯಾವುದೇ ಸಂಭಾವನೆಯಿಲ್ಲದೇ ಕೃಷಿ ಇಲಾಖೆಯ ರಾಯಭಾರಿಯಾಗಿರುವುದು ಹೆಮ್ಮೆಯ ವಿಚಾರ‌. ದರ್ಶನ್ ಅವರಿಗೆ ರೈತರ ಪರವಾಗಿ ಅಭಿನಂದನೆಗಳು ಎಂದರು.

ಕಾರ್ಯಕ್ರಮದಲ್ಲಿ ಕೃಷಿ ನಿರ್ದೇಶಕ ಶ್ರೀನಿವಾಸ್, ಮೇಲ್ಮನೆ ಸದಸ್ಯ ಸಂದೇಶ್ ನಾಗರಾಜ್, ಸೇರಿದಂತೆ ಕೃಷಿ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ದರ್ಶನ್ ಅವರು ಸಂಭಾವನೆ ಪಡೆಯದೆ ಕೃಷಿ ಇಲಾಖೆಗೆ ರಾಯಭಾರಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ದರ್ಶನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವೇಳೆ ಸಚಿವರ ಮಾತಿಗೆ ಮನ್ನಣೆ ನೀಡಿದ್ದ ಡಿ ಬಾಸ್ ರಾಯಭಾರಿಯಾಗಲು ಒಪ್ಪಿಗೆ ಸೂಚಿಸಿದ್ದರು.

ಕನ್ನಡ ಚಿತ್ರರಂಗದ ಮೇರು ನಟರಾಗಿರುವ ದರ್ಶನ್ ಪ್ರಾಣಿ ಪ್ರಿಯ ಕೂಡ ಹೌದು. ಮೈಸೂರು ಮೃಗಾಲಯದಲ್ಲಿ ಹುಲಿ ಸೇರಿದಂತೆ ಕೆಲವೊಂದು ವನ್ಯ ಜೀವಿಗಳನ್ನು ದತ್ತು ಪಡೆದಿರುವ ದಾಸ, ಅವುಗಳ ಪಾಲನೆ ಪೋಷಣೆಯ ನಿಗಾ ವಹಿಸಿದ್ದಾರೆ. ತಮ್ಮ ತೋಟದಲ್ಲಿ ಕುದುರೆ, ದನ, ಆಕಳುಗಳನ್ನು ಸಾಕುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: