ಮೈಸೂರು

ವಿಜಯ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರ ಕಾರ್ಯಾಗಾರ

ಮೈಸೂರು,ಮಾ.6:- ಪದವಿಪೂರ್ವ ಶಿಕ್ಷಣ ಇಲಾಖೆ, ಮೈಸೂರು ಜಿಲ್ಲೆ, ಮೈಸೂರು ಮತ್ತು ಮೈಸೂರು ಜಿಲ್ಲಾ ಪದವಿ ಪೂರ್ವ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆಯ ಸಂಯುಕ್ತಾಶ್ರಯದಲ್ಲಿ ವಿಜಯ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ಪರೀಕ್ಷೆಗೆ ಸಂಬಂಧಿಸಿದಂತೆ ಭೌತಶಾಸ್ತ್ರ ಉಪನ್ಯಾಸಕರಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಮತ್ತು ಪರಿಷ್ಕೃತ ಪಠ್ಯಕ್ರಮದ ವಿಶ್ಲೇಷಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಮೈಸೂರು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ (ಪ್ರಭಾರ) ಉಪನಿರ್ದೇಶಕರಾದ ನಾಗಮಲ್ಲೇಶ್‍ ಮಾತನಾಡಿ ಕಡಿತಗೊಳಿಸಿದ ಪಠ್ಯಭಾಗವನ್ನು ವಿದ್ಯಾರ್ಥಿಗಳಿಗೆ ವಿವರಿಸಿ ಸಂದೇಹಗಳನ್ನು ಪರಿಹರಿಸುವತ್ತ ಗಮನ ನೀಡಬೇಕು. ಪ್ರಾಯೋಗಿಕ ಹಾಗೂ ಲಿಖಿತ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಮರ್ಪಕವಾಗಿ ತರಬೇತಿ ನೀಡುವುದರ ಮೂಲಕ ಅಣಿಗೊಳಿಸಿ ಜಿಲ್ಲೆಗೆ ಶೇಕಡ 100ರಷ್ಟು ಫಲಿತಾಂಶ ನೀಡುವುದಕ್ಕೆ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ವಿಜಯ ವಿಠಲ ಕಾಲೇಜಿನ ಪ್ರಾಚಾರ್ಯರಾದ ಎಚ್.ಸತ್ಯಪ್ರಸಾದ್‍ ಕಾರ್ಯಾಗಾರ ಯಶಸ್ವಿಯಾಗಿ ನಡೆಯಲೆಂದು ಹಾರೈಸಿದರು.
ಬಿ.ಆರ್. ನೀಲಕಂಠ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಭೌತಶಾಸ್ತ್ರ ವೇದಿಕೆ ನಡೆದುಬಂದ ಹಾದಿಯನ್ನು ವಿವರಿಸುತ್ತಾ ಉಪನ್ಯಾಸಕರು ಇಂತಹ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ ಕಾರ್ಯಾಗಾರದ ಸದುಪಯೋಗಪಡೆದುಕೊಳ್ಳಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಭೌತಶಾಸ್ತ್ರದ ವಿಷಯದಲ್ಲಿ ಕಾಲೇಜಿಗೆ ಶೇಕಡ 100 ರಷ್ಟು ಫಲಿತಾಂಶವನ್ನು ನೀಡಿದ 15ಕ್ಕೂ ಹೆಚ್ಚು ಉಪನ್ಯಾಸಕರನ್ನು ಅಭಿನಂದಿಸಲಾಯಿತು. ದ್ವಿತೀಯ ಪಿಯುಸಿ ಪರೀಕ್ಷೆಗೆ ಅತ್ಯುಪಯುಕ್ತವಾದ ಭೌತಶಾಸ್ತ್ರ ಪರೀಕ್ಷಾ ಕೈಪಿಡಿಯನ್ನು ಸಮಾರಂಭದ ಗಣ್ಯರು ಬಿಡುಗಡೆ ಮಾಡಿದರು. ಅದಕ್ಕೆ ಸಹಕರಿಸಿದ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಮೈಸೂರು ಜಿಲ್ಲೆಯ ಎಲ್ಲಾ ಪದವಿಪೂರ್ವ ಕಾಲೇಜುಗಳಿಂದ 100ಕ್ಕೂ ಹೆಚ್ಚು ಭೌತಶಾಸ್ತ್ರ ಉಪನ್ಯಾಸಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಭೌತಶಾಸ್ತ್ರ ವೇದಿಕೆಯ ಕಾರ್ಯದರ್ಶಿ ಸಣ್ಣೇಗೌಡ, ವೇದಿಕೆಯ ಗೌರವಾಧ್ಯಕ್ಷರಾದ ರಾಮೇಗೌಡ, ಕಾರ್ಯಾಧ್ಯಕ್ಷರಾದ ಮುರುಗೇಶ್, ಸಂಪನ್ಮೂಲ ವ್ಯಕ್ತಿಗಳಾದ ರವೀಶ್‍ರವರು ಉಪಸ್ಥಿತರಿದ್ದರು. ಪ್ರೇರಣಾ ಪ್ರಾರ್ಥಿಸಿ, ತರಳಬಾಳು ಕಾಲೇಜಿನ ಉಪನ್ಯಾಸಕರಾದ ಕುಶಲಕುಮಾರಿ ಕಾರ್ಯಕ್ರಮ ನಿರೂಪಿಸಿ, ಶಾರದಾ ವಿಲಾಸ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಅಶೋಕ್‍ ಕುಮಾರ್‍ ವಂದನಾರ್ಪಣೆ ಮಾಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: