ಕ್ರೀಡೆಪ್ರಮುಖ ಸುದ್ದಿ

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸರಣಿ ಜಯ: ಟೆಸ್ಟ್ ಚಾಂಪಿಯನ್ ಶಿಪ್ ಗೆ ಆಯ್ಕೆ

ಅಹ್ಮದಾಬಾದ್,ಮಾ.6-ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆದ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತ ತಂಡ ಇನ್ನಿಂಗ್ಸ್ ಹಾಗೂ 25 ರನ್ ಗಳ ಜಯಗಳಿಸಿದೆ. ಆ ಮೂಲಕ 3-1ರ ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಈ ಗೆಲುವಿನ ಜೊತೆಗೆ ಭಾರತ ವಿಶ್ವ ಟೆಸ್ಟ್‌ ಕ್ರಿಕೆಟ್‌ ಚಾಂಪಿಯನ್‌ಶಿಪ್‌ ಫೈನಲ್‌ ತಲುಪಿದೆ. ಅಲ್ಲದೆ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ.

ದ್ವಿತೀಯ ಇನ್ನಿಂಗ್ಸ್‌ನಲ್ಲೂ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದ ಭಾರತೀಯ ಬೌಲರ್‌ಗಳು ಪ್ರಭಾವಿ ದಾಳಿ ಸಂಘಟಿಸಿದರು. ಪರಿಣಾಮ ಎರಡನೇ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಇಂಗ್ಲೆಂಡ್ ಇನ್ನಿಂಗ್ಸ್‌ ಸೋಲಿನ ಮುಖಭಂಗ ಅನುಭವಿಸಿತು.

160 ರನ್ ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 135 ರನ್ ಗಳಿಗೆ ಇಂಗ್ಲೆಂಡ್ ತಂಡ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಭಾರತದೆದುರು ಸೋಲೊಪ್ಪಿಕೊಂಡಿತು.

ಎರಡನೇ ಇನ್ನಿಂಗ್ಸ್‌ನ ಬೌಲಿಂಗ್‌ನಲ್ಲಿ ಅಕ್ಷರ್‌ ಪಟೇಲ್‌ ಮತ್ತು ರವಿಚಂದ್ರನ್‌ ಅಶ್ವಿನ್‌ ಮಿಂಚಿದರು. ಇಬ್ಬರೂ ತಲಾ ಐದೈದು ವಿಕೆಟ್‌ ಗಳಿಸಿ ಸಂಭ್ರಮಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅಕ್ಷರ್‌ ಪಟೇಲ್‌ 4 ವಿಕೆಟ್‌ ತಮ್ಮದಾಗಿಸಿಕೊಂಡಿದ್ದರು.

ರಿಷಭ್‌ ಪಂತ್‌ ‘ಮ್ಯಾನ್‌ ಆಫ್‌ದ ಮ್ಯಾಚ್‌’ ಎನಿಸಿದರು, ರವಿಚಂದ್ರ ಅಶ್ವಿನ್‌ ‘ಮ್ಯಾನ್‌ ಆಫ್‌ ದ ಸೀರಿಸ್’‌ಗೆ ಪಾತ್ರರಾದರು. ಈ ಮೊದಲು ರಿಷಭ್ ಪಂತ್ (101), ವಾಷಿಂಗ್ಟನ್ ಸುಂದರ್ (ಅಜೇಯ 96) ಹಾಗೂ ರೋಹಿತ್ ಶರ್ಮಾ (49) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 365 ರನ್ ಪೇರಿಸಿತ್ತು. ಈ ಮೂಲಕ 160 ರನ್‌ಗಳ ಬೃಹತ್ ಮುನ್ನಡೆ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು.

ಮೂರನೇ ದಿನದಾಟದಲ್ಲಿ ಆಕರ್ಷಕ ಬ್ಯಾಟಿಂಗ್ ಮುಂದುವರಿಸಿದ ವಾಷಿಂಗ್ಟನ್ ಸುಂದರ್ 96 ರನ್ ಗಳಿಸಿ ಅಜೇಯರಾಗುಳಿದರು. ಆದರೆ ವಿಕೆಟ್‌ನ ಮತ್ತೊಂದು ತುದಿಯಿಂದ ಸೂಕ್ತ ಬೆಂಬಲ ದೊರಕದೆ ಚೊಚ್ಚಲ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು.

ಏಳು ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿದ್ದ ಭಾರತಕ್ಕೆ ಸುಂದರ್ ಹಾಗೂ ಅಕ್ಷರ್ ಪಟೇಲ್ ನೆರವಾದರು. ನಾಲ್ಕನೇ ದಿನದಾಟದಲ್ಲೂ ಇವರಿಬ್ಬರು ಎದುರಾಳಿಗಳನ್ನು ಕಾಡಿದರು. ಅಲ್ಲದೆ ಎಂಟನೇ ವಿಕೆಟ್‌ಗೆ 106 ರನ್‌ಗಳ ಜೊತೆಯಾಟ ನೀಡಿದರು.

ಈ ನಡುವೆ ಸುಂದರ್ ಜೊತೆಗಿನ ಹೊಂದಾಣಿಕೆ ಕೊರತೆಯಿಂದಾಗಿ ಅಕ್ಷರ್ ಪಟೇಲ್ ರನೌಟ್‌ಗೆ ಬಲಿಯಾದರು. ಅಲ್ಲದೆ ಏಳು ರನ್ ಅಂತರದಿಂದ ಚೊಚ್ಚಲ ಅರ್ಧಶತಕ ಮಿಸ್ ಮಾಡಿಕೊಂಡರು. 97 ಎಸೆತಗಳನ್ನು ಎದುರಿಸಿದ ಅಕ್ಷರ್ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 43 ರನ್ ಗಳಿಸಿದರು. ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇದರೊಂದಿಗೆ ಭಾರತ 114.4 ಓವರ್‌ಗಳಲ್ಲಿ 365 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಅತ್ತ 174 ಎಸೆತಗಳನ್ನುಎದುರಿಸಿದ ಸುಂದರ್ 10 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 96 ರನ್ ಗಳಿಸಿ ಅಜೇಯರಾಗುಳಿದರು. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ ನಾಲ್ಕು, ಜೇಮ್ಸ್ ಆಯಂಡರ್ಸನ್ ಮೂರು ಮತ್ತು ಜ್ಯಾಕ್ ಲೀಚ್ ಎರಡು ವಿಕೆಟ್‌ಗಳನ್ನು ಕಬಳಿಸಿದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: