ಮೈಸೂರು

ಮೃತ ಪೌರಕಾರ್ಮಿಕ ಸುರೇಶ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ ಎಂ.ಶಿವಣ್ಣ

ಪತ್ನಿಗೆ ಉದ್ಯೋಗ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಕ್ರಮ

ಮೈಸೂರು,ಮಾ.6 ಅಕಾಲಿಕವಾಗಿ ಸಾವಿಗೀಡಾದ ಹೊರಗುತ್ತಿಗೆ ಪೌರಕಾರ್ಮಿಕ ಸುರೇಶ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರದ ಚೆಕ್ ಅನ್ನು ವಿತರಿಸಲಾಯಿತು.

ನಗರಪಾಲಿಕೆಯಲ್ಲಿ ಇಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ.ಶಿವಣ್ಣ ಹಾಗೂ ಮೇಯರ್ ರುಕ್ಮಿಣಿ ಮಾದೇಗೌಡ ನೇತೃತ್ವದಲ್ಲಿ ಸುರೇಶ್ ಅವರ ಪತ್ನಿ ವಸಂತ ಅವರಿಗೆ 5 ಲಕ್ಷ ರೂ. ಚೆಕ್ ಅನ್ನು ಹಸ್ತಾಂತರಿಸಲಾಯಿತು.

ಈ ವೇಳೆ ಮಾತನಾಡಿದ ಎಂ.ಶಿವಣ್ಣ ಅವರು, ಪತ್ರಿಕೆಯೊಂದರಲ್ಲಿ ಸುರೇಶ್ ನಿಧನರಾಗಿ ವರ್ಷ ಕಳೆದರೂ ಸೂಕ್ತ ಪರಿಹಾರ ಸಿಕ್ಕಿಲ್ಲವೆಂಬ ವರದಿ ಗಮನಿಸಿ ಅವರಿಗೆ ಪರಿಹಾರ ಕೊಡಿಸುವಲ್ಲಿ ಕಾರ್ಯೋನ್ಮುಖನಾದೆ. ಕರ್ತವ್ಯನಿರತ ಪೌರಕಾರ್ಮಿಕರು ಸಾವಿಗೀಡಾದರೆ ಅವರ ಕುಟುಂಬದವರಿಗೆ ಎಲ್ಲ ರೀತಿಯ ಸೌಲಭ್ಯ ದೊರಕಿಸಿಕೊಡಬೇಕೆಂಬುದು ನಮ್ಮ ಉದ್ದೇಶವಾಗಿದೆ. ಅದೇ ರೀತಿ ಸುರೇಶ್ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡುತ್ತಿದ್ದೇವೆ ಎಂದರು.

ಅಲ್ಲದೆ, ಸುರೇಶ್ ಪತ್ನಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದು, ಪೌರ ಕಾರ್ಮಿಕಳಾಗಿ ಕಸ ಸಂಗ್ರಹಿಸುವ ಕೆಲಸದ ಬದಲು ನಗರಪಾಲಿಕೆಯಲ್ಲೇ `ಡಿ’ ದರ್ಜೆ ಉದ್ಯೋಗ ನೀಡುವಂತೆ ಸೂಚನೆ ನೀಡಲಾಗಿದೆ. ಸುರೇಶ್ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ನಿಟ್ಟಿನಲ್ಲೂ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು.

ಮೈಸೂರು ಸ್ವಚ್ಚ ನಗರಿ ಪ್ರಶಸ್ತಿ ಬರಲು ಇಲ್ಲಿನ ಪೌರ ಕಾರ್ಮಿಕರ ಅಪಾರ ಶ್ರಮವಿದೆ. ಹಾಗಾಗಿ ನಗರಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ 2300 ಪೌರ ಕಾರ್ಮಿಕರಿಗೆ ವೇತನ ನೇರ ಪಾವತಿ ವ್ಯವಸ್ಥೆ ಜಾರಿಗೆ ಬರಬೇಕು. ಅಲ್ಲದೆ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಸೇವೆ ಖಾಯಂಗೊಳಿಸುಂತೆ ನಮ್ಮ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಪೌರ ಕಾರ್ಮಿಕರ ಸೇವೆಗೆ ನಗರಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿನ ಮಹತ್ವವಿದೆ. ಹಾಗಾಗಿ ಅಧಿಕಾರಿಗಳು ಅವರ ಬಗ್ಗೆ ಉದಾಸೀನ ಧೋರಣೆ ತೋರಬಾರದು. ಅಲ್ಲದೆ ನಾನೂ ಸಹ ಬೆಳಗಿನ ವೇಳೆ ನಗರಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸಿ ಸಮಸ್ಯೆಗಳನ್ನು ವೀಕ್ಷಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರ ಪಾಲಿಕೆಯ ಉಪಮೇಯರ್ ಅನ್ವರ್ ಬೇಗ್, ಹೆಚ್ಚುವರಿ ಆಯುಕ್ತರಾದ ಎನ್.ಎಂ. ಶಿವಕುಮಾರ್ ಹಾಗೂ ಸಫಾಯಿ ಕರ್ಮಚಾರಿ ಮುಖಂಡರುಗಳು ಹಾಜರಿದ್ದರು. (ಎಂ.ಎನ್)

 

Leave a Reply

comments

Related Articles

error: