ಕರ್ನಾಟಕಪ್ರಮುಖ ಸುದ್ದಿಮೈಸೂರು

ಮಾ.31ರಿಂದ    ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ‘ಸಂವಿಧಾನ ಓದು’ ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ : ಸಂಸದ ಶ್ರೀನಿವಾಸ್ ಪ್ರಸಾದ್

ಚಾಮರಾಜನಗರ/ಮೈಸೂರು, ಮಾ.8:- ಮಾ.31ರಿಂದ    ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ‘ಸಂವಿಧಾನ ಓದು’ ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ತಿಳಿಸಿದರು.

ಚಾಮರಾಜನಗರದಲ್ಲಿ ನಿನ್ನೆ  ಮಾಧ್ಯಮದವರೊಂದಿಗೆ ಮಾತನಾಡಿದ ಅವರು   ಅಂದು ಚಾಮರಾಜನಗರದ ಅಂಬೇಡ್ಕರ್‌ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ತಾಲ್ಲೂಕುಗಳ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಗುವುದು. 18 ಲಕ್ಷ ರೂ ವೆಚ್ಚದ ಸಂಸದರ ಅನುದಾನದಲ್ಲಿ ಪಿಯು ಕಾಲೇಜಿನ 30 ಸಾವಿರ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುವುದು. ಪುಸ್ತಕ ಮುದ್ರಣವನ್ನು ಸಮಾನತೆ ಪ್ರಕಾಶನ ಸಂಸ್ಥೆಗೆ ನೀಡಲಾಗಿದ್ದು, ಪುಸ್ತಕ ಮುದ್ರಣ ಹಂತದಲ್ಲಿದೆ ಎಂದು ಹೇಳಿದರು.

ಆದಿವಾಸಿಗಳಿಗೆ ಮೀಸಲಾತಿ ಸೌಲಭ್ಯ ನೀಡಬಾರದೆಂಬ ಸಂಸದ ಪ್ರತಾಪ್‌ ಸಿಂಹ ಅವರ ಹೇಳಿಕೆಗೆ, ಸಂವಿಧಾನದಲ್ಲಿ ಹಿಂದೂ, ಸಿಖ್‌,ಬೌದ್ಧ ಧರ್ಮದಲ್ಲಿನ ಪರಿಶಿಷ್ಟ ಜಾತಿ ಜನರಿಗೆ ಮೀಸಲಾತಿ ನೀಡಲು ಅವಕಾಶವಿದೆ. ಆದರೆ ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಆದಿವಾಸಿಗಳಿಗೆ ಸದ್ಯಕ್ಕೆ ಸಂವಿಧಾನಬದ್ಧವಾದ ಮೀಸಲಾತಿ ಇಲ್ಲ ಎಂದರು.

ಆರನೇ ತರಗತಿ ಪಠ್ಯದಲ್ಲಿ ಬೌದ್ಧ, ಜೈನ ಧರ್ಮದ ಅಧ್ಯಾಯದ ಪೀಠಿಕೆಯನ್ನು ಕೈಬಿಟ್ಟಿರುವುದಕ್ಕೆ ಪ್ರತಿಕ್ರಿಯಿಸಿದ ಪ್ರಸಾದ್‌, ಬೇರೆ ಧರ್ಮಕ್ಕೆ ನೋವುಂಟು ಮಾಡುತ್ತದೆಂಬ ಮಠಾಧೀಶರೊಬ್ಬರು ವೈಯುಕ್ತಿಕ ಅಭಿಪ್ರಾಯದ ಮೇರೆಗೆ ಅಧ್ಯಾಯವನ್ನು ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ತಜ್ಞರನ್ನು ಒಳಗೊಂಡ ಪಠ್ಯ ಪುಸ್ತಕ ಸಮಿತಿ ಅಧ್ಯಯನ ಮಾಡಿ ಪಠ್ಯ ಅಳವಡಿಸಿರುತ್ತದೆ. ಪಠ್ಯವನ್ನು ಅಷ್ಟು ಸುಲಭವಾಗಿ ತೆಗೆಯಲು ಬರುವುದಿಲ್ಲ. ಬೇರೆ ಧರ್ಮಕ್ಕೆ ನೋವಿಸುವ ದೃಷ್ಟಿಯಲ್ಲಿ ಪಠ್ಯವಿದೆ ಎಂದಾಗ ಮಾತ್ರ ಸರ್ಕಾರ ಅದನ್ನು ತೆಗೆಯಬೇಕಾಗುತ್ತದೆ. ಈ ಕುರಿತು ಸಚಿವ ಸುರೇಶ್‌ ಕುಮಾರ್‌ ಅವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.

ಮೀಸಲಾತಿ ಬಗ್ಗೆ ತಿಳಿವಳಿಕೆ ಇಲ್ಲದ ಮಠಾಧೀಶರು ಮೀಸಲಾತಿಗಾಗಿ ಬೀದಿಗಿಳಿಯುವ ಹಾಗೂ ರಾಜಕೀಯದಲ್ಲಿ ಮೂಗು ತೂರಿಸುವ ಕೆಲಸವನ್ನು ಮಾಡಬಾರದು. ಮಠಾಧೀಶರ ಚಟುವಟಿಕೆ ಹಾಗೂ ಕೆಲಸ ಕಾರ್ಯಗಳೇ ಬೇರೆ. ಮಠಮಾನ್ಯಗಳಲ್ಲಿ ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಆದರೆ ಬೀದಿಗಳಿಯುವುದು ಸಮಂಜಸವಲ್ಲ ಎಂದು  ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: