ಕರ್ನಾಟಕಪ್ರಮುಖ ಸುದ್ದಿ

ಇಂದು ರಾಜ್ಯ ಬಜೆಟ್ ಮಂಡನೆ: ಸಿಎಂ ಬಿಎಸ್ವೈ ಅವರ 8ನೇ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ  

ಬೆಂಗಳೂರು,ಮಾ.8-೨೦೨೧-೨೨ನೇ ಸಾಲಿನ ಮುಂಗಡಪತ್ರ (ಬಜೆಟ್) ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ೮ನೇ ಬಾರಿಗೆ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ.

ಕೊರೊನಾ ಸಂಕಷ್ಟ, ಆರ್ಥಿಕ ಹಿನ್ನಡೆ, ಸಂಪನ್ಮೂಲ ಕೊರತೆ ಇವುಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಗೆ ಹಣ ಹೊಂದಿಸಿ, ಹೆಚ್ಚಿನ ತೆರಿಗೆ ಹೊರೆಯಿಲ್ಲದ ಬಜೆಟ್ ಮಂಡಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಸೋಮವಾರ ವಿಧಾನಸಭೆಯಲ್ಲಿ ಮಧ್ಯಾಹ್ನ ೧೨.೦೫ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ನಿರೀಕ್ಷೆಗಳು ಹೆಚ್ಚಾಗಿವೆ. ವಿವಿಧ ಕ್ಷೇತ್ರಗಳಿಂದ ಬೇಡಿಕೆಗಳ ಪಟ್ಟಿ ಬಂದಿದೆ. ಶಾಸಕರುಗಳೂ ತಮ್ಮ ತಮ್ಮ ಕ್ಷೇತ್ರಕ್ಕೆ ಅಗತ್ಯವಿರುವ ಯೋಜನೆಗಳು, ಹಣಕಾಸು ನೆರವಿಗೆ ಮನವಿ ಮಾಡಿದ್ದಾರೆ.

ಎಲ್ಲ ವರ್ಗದ ಸಮುದಾಯವನ್ನೂ ಗಣನೆಗೆ ತೆಗೆದುಕೊಂಡು ಹಾಗೂ ಎಲ್ಲ ಇಲಾಖೆಗಳು, ಎಫ್‌ಕೆಸಿಸಿಐ, ಸಣ್ಣ ಕೈಗಾರಿಕೆಗಳ ಸಂಘಟನೆಗಳು, ರೈತ ಮುಖಂಡರೊಂದಿಗೂ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಿರುವ ಮುಖ್ಯಮಂತ್ರಿಗಳು ಎಲ್ಲರಿಗೂ ಸವಾಧಾನವಾಗುವ ಬಜೆಟ್ ಮಂಡಿಸಲು ಕಾರ್ಯತಂತ್ರ ರೂಪಿಸಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲಿ ಆರೋಗ್ಯ ವಲಯಕ್ಕೆ ಹೆಚ್ಚಿನ ಹಣ ಮೀಸಲಿಡುವ ನಿರೀಕ್ಷೆಯಿದೆ. ಮೂಲ ಸೌಕರ್ಯ, ಶಿಕ್ಷಣ, ನೀರಾವರಿ ಹಾಗೂ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿದ್ದಾರೆ ಎನ್ನಲಾಗಿದೆ. ಸಂಕಷ್ಟಕ್ಕೆ ಸಿಲುಕಿರುವ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಹಾಗೂ ಸಂಪನ್ಮೂಲ ಕ್ರೋಡೀಕರಣಕ್ಕೆ ಯಾವ ಮಾರ್ಗವನ್ನು ಅನುಸರಿಸಲಿದ್ದಾರೆ ಎಂಬುದು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ. ಆರ್ಥಿಕತೆಗೆ ಟಾನಿಕ್ ನೀಡಲು ಕೇಂದ್ರದಿಂದ ೮೯,೧೭೬ ಕೋಟಿ ರೂ. ಸಾಲ ಪಡೆಯಬಹುದಾಗಿದ್ದು, ಇಷ್ಟೊಂದು ದೊಡ್ಡ ಮೊತ್ತದ ಸಾಲ ಪಡೆದರೆ ಹಳೆಯ ಸಾಲದ ಮೇಲಿನ ಬಡ್ಡಿಯನ್ನು ಸೇರಿಸಿ ೨೫ ಸಾವಿರ ಕೋಟಿ ರೂ. ಪಾವತಿಸಬೇಕಾದ ಸವಾಲು ಯಡಿಯೂರಪ್ಪ ಅವರ ಮುಂದಿದೆ.

ಪೆಟ್ರೋಲ್-ಡೀಸೆಲ್, ಅಡುಗೆ ಅನಿಲ ದರ ಗಗನಕ್ಕೇರಿದೆ. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಶ್ರೀಸಾಮಾನ್ಯ ತತ್ತರಿಸಿ ಹೋಗಿದ್ದಾನೆ. ಈ ಹಿನ್ನೆಲೆಯಲ್ಲಿ ಇಂಧನ ದರದ ಮೇಲಿನ ಸುಂಕ ಕಡಿತ ಮಾಡಬೇಕೆಂಬ ಒತ್ತಡಗಳು ಕೇಳಿ ಬಂದಿವೆ. ಆದರೆ, ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಮುಖ್ಯಮಂತ್ರಿಗಳು ಸಿದ್ಧರಿಲ್ಲ. ಈ ಅಂಶವನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷ ೨.೩೭ ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿತ್ತು. ಆದರೆ, ಈ ಬಾರಿ ಬಜೆಟ್ ಮಂಡನೆಯ ಗಾತ್ರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹಣಕಾಸು ಮೂಲಗಳು ತಿಳಿಸಿವೆ.

ರಾಜ್ಯಕ್ಕೆ ತೆರಿಗೆ ಸಂಗ್ರಹ ಪ್ರಮಾಣವೂ ಈ ವರ್ಷ ಇಳಿಕೆಯಾಗಿದ್ದು, ಅಬಕಾರಿ ಇಲಾಖೆಯಲ್ಲಿ ಮಾತ್ರ ನಿಗದಿತ ಗುರಿಯತ್ತ ಸಾಗಿದೆ. ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಯಡಿಯೂರಪ್ಪ ಸೋಮವಾರ ಮಂಡಿಸಲಿರುವ ಬಜೆಟ್ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. (ಕೆ.ಎಸ್,ಎಂ.ಎನ್)

Leave a Reply

comments

Related Articles

error: