ಮೈಸೂರು

ನೀರಿಗಾಗಿ ಹಾಹಾಕಾರ : ವೃಥಾ ಪೋಲಾಗುತ್ತಿದೆ ನೀರು, ಕ್ರಮಕೈಗೊಳ್ಳುವವರು ಯಾರು?

ಮೈಸೂರಿನ ಹಲವೆಡೆ ಕುಡಿಯುವ ನೀರಿಗೆ ತತ್ವಾರ ಬಂದಿದೆ. ಹಾಹಾಕಾರ ಪರಿಸ್ಥಿತಿ ಎದುರಾಗಿದೆ. ಎರಡು ಮೂರು ದಿನಗಳಿಗೊಮ್ಮೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಸಲಾಗುತ್ತಿದೆ. ಆದರೆ ಇದೇ ನಗರದ ಹೊರವಲಯದಲ್ಲಿ ಕುಡಿಯುವ ನೀರಿನ ಪೈಪೊಂದು ತುಂಡಾಗಿದ್ದು ನೀರು ಅವ್ಯಾಹತವಾಗಿ ಹರಿಯುತ್ತಲೇ ಇದೆ. ಆದರೆ ಇಲ್ಲಿರುವ ಯಾರೂ ಸಂಬಂಧಪಟ್ಟವರಿಗೆ ತಿಳಿಸದೇ, ತಾವೂ ಅದನ್ನು ದುರಸ್ತಿ ಮಾಡದೇ ಅಸಡ್ಡೆ ತೋರುತ್ತಿದ್ದಾರೆ.

ಮೈಸೂರು ಬನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರಸ್ತಿ ಕಾಮಗಾರಿ ನಡೆದಿದೆ. ಟೆರೆಶಿಯನ್ ಕಾಲೇಜು ಸಮೀಪದ ಈ ಪ್ರದೇಶದಲ್ಲಿ ಕಾಮಗಾರಿಯ ವೇಳೆ ಇಲ್ಲಿನ ಕುಡಿಯುವ ನೀರಿನ ಪೈಪ್ ಲೈನ್ ತುಂಡರಿಸಲಾಗಿದೆ. ಅದರಿಂದ ಕುಡಿಯುವ ನೀರು ಕಳೆದ ಮೂರುದಿನಗಳಿಂದ ಪೋಲಾಗುತ್ತಲೇ ಇದೆ. ಆದರೆ ಇಲ್ಲಿ ಕಾಮಗಾರಿ ನಿರ್ವಹಿಸುವವರು ತಮಗೆ ಏನೂ ಸಂಬಂಧವೇ ಇಲ್ಲವೇನೋ ಎಂಬಂತೆ ಇದ್ದಾರೆ. ಪೈಪ್ ಲೈನ್ ತುಂಡಾಗಿದೆ ಎಂಬ ಮಾಹಿತಿಯನ್ನೂ ಸಂಬಂಧಪಟ್ಟವರಿಗೆ ನೀಡಿದಂತೆ ಕಾಣಿಸುತ್ತಿಲ್ಲ. ಮೈಸೂರಿನಲ್ಲಿ ಈಗಾಗಲೇ ಕುಡಿಯುವ ನೀರಿಗೆ ಬರಗಾಲ ಎಂಬಂತಾಗಿದೆ. ಇನ್ನೂ ಮಳೆ ಬಂದು ಜಲಾಶಯಗಳಲ್ಲಿ ನೀರು ತುಂಬಲು ಕಡಿಮೆಯೆಂದರೂ ಎರಡು ತಿಂಗಳಂತೂ ಕಾಯಲೇಬೇಕು. ಮೈಸೂರು ಗ್ರಾಮಗಳಲ್ಲಿ ಜಾನುವಾರುಗಳಿಗೂ ಕುಡಿಯಲು ನೀರು ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ನೀರಿನ ಅಗತ್ಯತೆ ಹೆಚ್ಚಿರುವ ಈ ದಿನಗಳಲ್ಲಿ ಮಾನವೀಯತೆ ಇಲ್ಲದೇ ನೀರನ್ನು ವೃಥಾ ಪೋಲಾಗಲು ಬಿಟ್ಟಿರುವುದು ಆ ಮಾರ್ಗದಲ್ಲಿ ಹಾದು ಹೋಗುವವರ ಆಕ್ರೋಶಕ್ಕೆ ಕಾರಣವಾಗಿದೆ. (ಎಚ್.ಎನ್-ಎಸ್.ಎಚ್)

Leave a Reply

comments

Related Articles

error: