ಮೈಸೂರು

ಮತ್ತೊಂದು ಪಾರಂಪರಿಕ ಕಟ್ಟಡ ಧರಾಶಾಹಿ

ಮೈಸೂರಿನ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಪಾರಂಪರಿಕ ಇಲಾಖೆಯಲ್ಲಿ ಪಾರಂಪರಿಕ ದಿನಾಚರಣೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಪಾರಂಪರಿಕ ಕಟ್ಟಡವೊಂದು ಧರೆಗುರುಳಿ ಇತಿಹಾಸದ ಪುಟ ಸೇರಿರುವುದು ದುರಂತವೇ ಸರಿ.

ಸಾಕಷ್ಟು ಪಾರಂಪರಿಕ ಕಟ್ಟಡಗಳಿರುವ ದಿವಾನ್ಸ್ ರಸ್ತೆಯಲ್ಲಿದ್ದ ಮಣಿಪಾಲ್ ಫೈನಾನ್ಸ್ ಸಂಸ್ಥೆಯ ಕಟ್ಟಡವನ್ನು ಜೆಸಿಬಿ ಯಂತ್ರದ ಸಹಾಯದಿಂದ ನೆಲಸಮಗೊಳಿಸಲಾಗಿದ್ದು, ಇನ್ನೊಂದು ಪಾರಂಪರಿಕ ಕಟ್ಟಡ ಕಾಲಗರ್ಭದಲ್ಲಿ ಸೇರಿಕೊಂಡಿದೆ. ಬಹಳ ವರ್ಷಗಳಿಂ‍ದ ಮಣಿಪಾಲ್ ಫೈನಾನ್ಸ್ ಈ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿತ್ತು. ಆದರೆ ಕೆಲವು ವರ್ಷಗಳಿಂದ ಕಚೇರಿ ಸ್ಥಗಿತಗೊಂಡಿತ್ತು. ಈಗ ಈ ಕಟ್ಟಡ ನೆಲಸಮಗೊಳ್ಳಲು ಇದೇ ಪರೋಕ್ಷವಾಗಿ ಕಾರಣವಾಗಿದೆ. ಈ ಸಂಸ್ಥೆ ಇಲ್ಲಿಯೇ ತನ್ನ ಕಾರ್ಯಚಟುವಟಿಕೆಯನ್ನು ಮುಂದುವರೆಸಿದ್ದರೆ, ಇನ್ನೂ ಕೆಲ ವರ್ಷಗಳ ಕಾಲ ಕಟ್ಟಡ ಉಳಿಯುತ್ತಿತ್ತು ಎಂದು ಹೇಳಲಾಗುತ್ತಿದೆ.

ದಿವಾನ್ಸ್ ರಸ್ತೆಯಲ್ಲಿ ಸಾಕಷ್ಟು ಪುರಾತನ ಕಟ್ಟಡಗಳಿದ್ದು, 1910 ರ ವೇಳೆಯಲ್ಲಿ ಈ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ತನ್ನ ಅಸ್ತಿತ್ವವನ್ನು ಕಳೆದುಕೊಂಡ ಮಣಿಪಾಲ್ ಸಂಸ್ಥೆ ಕಟ್ಟಡದಲ್ಲಿ ಮೂಲತಃ ರಾಮಕೃಷ್ಣ ಆಶ್ರಮದ ಚಟುವಟಿಕೆಗಳು  ನಡೆಯುತ್ತಿದ್ದವು. ಆಶ್ರಮದ ಶಾಲೆ ಇಲ್ಲಿಯೇ ಪ್ರಾರಂಭವಾಗಿದ್ದು, ಆಗ ಕುವೆಂಪು ಅವರು ಇಲ್ಲಿಯೇ ವ್ಯಾಸಂಗ ಮಾಡುತ್ತಿದ್ದರು ಎನ್ನುವುದು ವಿಶೇಷವಾಗಿದೆ.

ನಗರದಲ್ಲಿ ಒಟ್ಟು 256 ಪಾರಂಪರಿಕ ಕಟ್ಟಡಗಳಿವೆ ಎಂದು ಅಂದಾಜಿಸಲಾಗಿದೆ. ಅವುಗಳೆಲ್ಲಾ ಹರಿದು ಹಂಚಿ ಹೋಗಿ ಖಾಸಗಿ, ಅರೆ ಖಾಸಗಿ ವ್ಯಕ್ತಿಗಳ ಪಾಲಾಗಿ ಅಧೋಗತಿಯತ್ತ ಸಾಗಿವೆ. ಹೀಗಾಗಿ ಅವುಗಳ ನಿರ್ವಹಣೆ ಮತ್ತು ಅಭಿವೃದ್ಧಿಗೂ ಹಿನ್ನಡೆಯಾಗುತ್ತಿದೆ. (ಎಲ್.ಜಿ-ಎಸ್.ಎಚ್)

 

 

Leave a Reply

comments

Related Articles

error: