ಮೈಸೂರು

ಮಹಿಳೆ ಮತ್ತು ಮಕ್ಕಳ ಕಳ್ಳಸಾಗಾಣಿಕೆ ಕುರಿತು ಅರಿವಿನ ಕಾರ್ಯಕ್ರಮ

ಮೈಸೂರು,ಮಾ.9:- ಮಾದಕ ವಸ್ತುಗಳ ಮತ್ತು ಮಾರಕ ಶಸ್ತ್ರಗಳ ಕಳ್ಳಸಾಗಾಣಿಕೆ ನಂತರ ಮಾನವ ಕಳ್ಳಸಾಗಾಣಿಕೆ ಹಿಂದಿನ ದಿನಗಳಲ್ಲಿ ಸಮಾಜ ಎದುರಿಸುತ್ತಿರುವ ಮೂರನೇ ಬೃಹತ್ ಸಮಸ್ಯೆ ಎಂದು ಮೈಸೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಪದ್ಮ ಅವರು ಅಭಿಪ್ರಾಯಪಟ್ಟರು.
ಅವರು ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳೆ ಮತ್ತು ಮಕ್ಕಳ ಕಳ್ಳಸಾಗಾಣಿಕೆ ಕುರಿತು ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪದ್ಮ ಮಾತನಾಡಿ, ಸಮಾಜ ಸಂಕೀರ್ಣಗೊಳ್ಳುತ್ತಾ ಹೋದಂತೆ ಹಣದ ದುರಾಸೆಯೂ ಹೆಚ್ಚಾಗಿದ್ದು, ಹಣದ ದಾಹದಿಂದ ಮಹಿಳೆ ಮತ್ತು ಮಕ್ಕಳ ಕಳ್ಳಸಾಗಾಣಿಕೆಯಂತಹ ಹೀನ ಕೃತ್ಯಗಳು ಜರುಗುತ್ತವೆ. ಅಂತಹ ಮಕ್ಕಳು ಮತ್ತು ಮಹಿಳೆಯರನ್ನು ಭಿಕ್ಷಾಟನೆ, ವೇಶ್ಯಾವಾಟಿಕೆ, ಅಶ್ಲೀಲ ಚಿತ್ರಗಳಂತಹ ಅಮಾನವೀಯ ಕೃತ್ಯಗಳಲ್ಲಿ ಬಳಸಲಾಗುತ್ತದೆ. ಅಲ್ಲದೆ ಅವರ ದೇಹದ ಅಂಗಾಂಗಗಳನ್ನು ಮಾರಾಟ ಮಾಡಲಾಗುತ್ತದೆ. ಸಾಲದ ಬಾಧೆಯನ್ನು ತಾಳಲಾರದೆ ಇಂತಹ ಕೆಲಸಕ್ಕೆ ಕೈ ಹಾಕುತ್ತಾರೆ ಎಂದು ತಿಳಿಸಿದರು, ಹಾಗೆಯೇ ದತ್ತು ತೆಗೆದುಕೊಳ್ಳುವ ಸುದೀರ್ಘ ಕಾನೂನಿನ ಕ್ರಮಕ್ಕೆ ಒಳಪಡಲಿಚ್ಛಿಸದವರು ಮಕ್ಕಳ ಸಾಗಾಣಿಕೆಯಲ್ಲಿ ಪಾಲುದಾರರಾಗಿರುತ್ತಾರೆ ಎಂದು ನುಡಿದರು. ಇಂತಹ ಪ್ರಕರಣಗಳು ರಾತ್ರೋರಾತ್ರಿ ಅಥವಾ ಒಂದು ದಿನ ನಡೆಯುವುದಿಲ್ಲ. ಒಂದು ವ್ಯವಸ್ಥಿತ ಜಾಲ ಮಹಿಳೆ ಮತ್ತು ಮಕ್ಕಳ ಚಲನ ವಲನಗಳನ್ನು ಗಮನಿಸಿ ಊಹಿಸಲು ಸಾಧ್ಯವಾಗದ ಹತ್ತಿರದ ಸಂಬಂಧಿಗಳ ಅಥವಾ ಸ್ನೇಹಿತರ ಸಹಾಯದಿಂದ ನಡೆಯುತ್ತದೆ.
ಕೇವಲ ಅನಕ್ಷರಸ್ಥರು ಅಥವಾ ಅಶಿಕ್ಷಿತರು ಇಂತಹ ಜಾಲಗಳಿಗೆ ಬಲಿಯಾಗದೆ ಸುಶಿಕ್ಷಿತರು ವಿದೇಶದಲ್ಲಿ ಅಥವಾ ದೊಡ್ಡ ದೊಡ್ಡ ನಗರಗಳಲ್ಲಿ ಒಳ್ಳೆಯ ಕೆಲಸ ಅಥವಾ ಹೆಚ್ಚಿನ ಆದಾಯದ ಆಮಿಷಕ್ಕೆ ಬಲಿಯಾಗಿ ತಮ್ಮ ಜೀವನವನ್ನು ನರಕದ ಕೂಪವನ್ನಾಗಿ ಮಾಡಿಕೊಂಡಿರುವ ನಿದರ್ಶನಗಳು ನಮ್ಮ ಸಮಾಜದಲ್ಲಿದೆ ಎಂದು ಹೇಳಿದರು. ತಮ್ಮದಲ್ಲದ ತಪ್ಪಿಗೆ ಸಂಕಷ್ಟದಲ್ಲಿರುವವರ ಒಂದು ಸಮಾಜವೇ ನಮ್ಮಲ್ಲಿ ನಿರ್ಮಿತವಾಗಿರುವುದು ದುರದೃಷ್ಟಕರವೆಂದು ಖೇದ ವ್ಯಕ್ತಪಡಿಸಿದರು.
ಸಮಾಜದ ಇಂತಹ ಒಂದು ಅಗಾಧವಾದ ಸಮಸ್ಯೆಯನ್ನು ನಿವಾರಿಸಬೇಕಾದರೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ತಿಳಿಸುತ್ತಾ, ಹಾಗೆಯೇ ಮಕ್ಕಳನ್ನು ಲಿಂಗಭೇದವಿಲ್ಲದೆ ಬೆಳಸಬೇಕು, ಪುರುಷರು ಮಹಿಳೆಯರನ್ನು ನೋಡುವ ದೃಷ್ಟಿಕೋನವು ಬದಲಾಗಬೇಕು ಎಂದು ಅಭಿಪ್ರಾಯಪಟ್ಟರು.
ಮೈಸೂರು (ವೆಸ್ಟ್)ನ ಇನ್ನರ್ ವೀಲ್ ಕ್ಲಬ್‍ನ ಅಧ್ಯಕ್ಷರಾದ ಛಾಯಾ ವೆಂಕಟೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇನ್ನರ್ ವೀಲ್ ಕ್ಲಬ್‍ ನ ಕಾರ್ಯದರ್ಶಿಗಳಾದ ಶ್ವೇತಾಕೃಷ್ಣನ್, ಕ್ಯಾಂಗ್ರೊ ಕೇರ್ ಆಸ್ಪತ್ರೆಯ ಪ್ರೀತಿ ನಾಗರಾಜು ಅವರುಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಡಾ. ಟಿ. ವಿಜಯಲಕ್ಷ್ಮೀಮುರಳೀಧರ್ ಅವರು ಎಲ್ಲರನ್ನು ಸ್ವಾಗತಿಸಿದರು. ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ ಅವರು ವಂದನಾರ್ಪಣೆ ಮಾಡಿದರು. ಮಹಿಳಾ ಸಬಲೀಕರಣ ವೇದಿಕೆಯ ಸಂಚಾಲಕರಾದ ರಾಧಿಕಾರಾಣಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸ್ಪರ್ಶ ಸಮಿತಿಯ ಸಂಚಾಲಕರಾದ ಶೃತಿ ಪೂಣಚ್ಚ, ವಾಣಿ ಅವರುಗಳು ಉಪಸ್ಥಿತರಿದ್ದರು. 100 ವಿದ್ಯಾರ್ಥಿನಿಯರು ಕಾರ್ಯಕ್ರಮದ ಸದುಪದಯೋಗ ಪಡೆದುಕೊಂಡರು. ಕಾಲೇಜಿನ ಸ್ಪರ್ಶ ಸಮಿತಿ, ಮಹಿಳಾ ಸಬಲೀಕರಣ ವೇದಿಕೆ, ಐಕ್ಯೂಎಸಿ ಘಟಕಗಳು ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಮೈಸೂರು (ವೆಸ್ಟ್)ನ ಇನ್ನರ್ ವೀಲ್ ಕ್ಲಬ್ ಮತ್ತು ಕ್ಯಾಂಗ್ರೋ ಕೇರ್ ಆಸ್ಪತ್ರೆ ಪ್ರಾಯೋಜಕತ್ವದಲ್ಲಿ ನಡೆಸಲಾಯಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: