ಮೈಸೂರು

ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಅನ್ಯಾಯ : ಕೌನ್ಸಿಲಿಂಗ್ ಸ್ಥಗಿತಕ್ಕೆ ರಾಜೇಶ್ವರಿ ಒತ್ತಾಯ

2014-15ನೇ ಸಾಲಿನ ಪ್ರೌಢಶಾಲಾ ಶಿಕ್ಷಕರ ಆಯ್ಕೆ ಪ್ರಕ್ರಿಯೆಯಲ್ಲಿ ಏಕಸ್ವಾಮ್ಯ ನೀತಿಯನ್ನು ಅನುಸರಿಸದೆ ಮೈಸೂರು ವಿಭಾಗದಿಂದ ಹಲವರಿಗೆ ಅನ್ಯಾಯವಾಗಿದೆ ಎಂದು ಉದ್ಯೋಗ ವಂಚಿತೆ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿಯ ರಾಜೇಶ್ವರಿ ದೂರಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿಂದು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ನನ್ನ ಹೆಸರನ್ನು ಅಂತಿಮ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಇಲಾಖೆ ನೀಡುತ್ತಿರುವ ಸಬೂಬು ಸಮಂಜಸವಲ್ಲ.  ಅಂತಿಮ ಆಯ್ಕೆ ಪಟ್ಟಿಯಲ್ಲಿ ಬೆಂಗಳೂರು, ಗುಲ್ಬರ್ಗಾ, ಬೆಳಗಾವಿ ವಿಭಾಗಗಳಲ್ಲಿ ಅನುಸರಿಸುತ್ತಿರುವ 2016ನೇ ತಿದ್ದುಪಡಿ ಅಧಿಸೂಚನೆಯನ್ನು ಮೈಸೂರು ವಿಭಾಗವೂ ಕೂಡ ಅನುಸರಿಸಿ ಅಂತಿಮ ಆಯ್ಕೆಪಟ್ಟಿಯಲ್ಲಿ ತಮ್ಮನ್ನು ಪರಿಗಣಿಸಿ ನೇಮಕಾತಿ ಆದೇಶವನ್ನು ನೀಡಬೇಕೆಂದು ಒತ್ತಾಯಿಸಿದರು.

ರಾಜ್ಯದ ಇತರೆ ವಿಭಾಗದಲ್ಲಿ ಅಧಿಸೂಚನೆ ದಿನಾಂಕದ ನಂತರ ವಿದ್ಯಾರ್ಹತೆ ಪಡೆದ ವಿದ್ಯಾರ್ಥಿಗಳನ್ನು ನೇಮಕಾತಿಯಲ್ಲಿ ಪರಿಗಣಿಸಲಾಗುತ್ತಿದೆ. ಆದರೆ ಮೈಸೂರು ವಿಭಾಗದಲ್ಲಿ ಮಾತ್ರ ರದ್ದಾಗಿರುವ ಹಳೆಯ ಅಧಿಸೂಚನೆಯನ್ನು ಜಾರಿಗೊಳಿಸಿ ಸಂಬಂಧಿಸಿದ ಅಧಿಕಾರಿಗಳು ಇಲ್ಲ ಸಲ್ಲದ ನೆಪವನ್ನು ನೀಡುತ್ತಿದ್ದಾರೆ.  ಸರ್ಕಾರದ ಇಬ್ಬಗೆಯ ನೀತಿಯಿಂದಾಗಿ ಜಿಲ್ಲೆಯ ಕೊಳ್ಳೆಗಾಲದ ಶೃತಿ.ಎನ್, ಗುಲ್ಬರ್ಗಾದ ನಾಗೇಶ್ ಮುದ್ದಾಳೆಯವರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದ ಅವರು, ಈ ಬಗ್ಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ ದೂರು ದಾಖಲಿಸಲಾಗಿದೆ. ಸರ್ಕಾರ ಪ್ರಸ್ತುತ ನಡೆಯುತ್ತಿರುವ ಕೌನ್ಸಿಲಿಂಗ್ ಅನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರಲ್ಲದೇ, ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. (ಕೆ.ಆರ್.ಎಂ-ಎಸ್.ಎಚ್)

Leave a Reply

comments

Related Articles

error: