ಕರ್ನಾಟಕಪ್ರಮುಖ ಸುದ್ದಿ

ಸಿಡಿಯನ್ನು ಕಾಂಗ್ರೆಸ್ ನವರೇ ಮಾಡಿದ್ದಾರೆ: ಸಚಿವ ಎಸ್.ಟಿ.ಸೋಮಶೇಖರ್ ಆರೋಪ

ಬೆಂಗಳೂರು,ಮಾ.10-ಸಿಡಿಯನ್ನು ಕಾಂಗ್ರೆಸ್ ನವರೇ ಮಾಡಿರೋದು. ಇಂತಹ ಮನೆಹಾಳು ಕೆಲಸ ಮಾಡೋರು ಅವ್ರೇ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 20 ವರ್ಷ ಕಾಂಗ್ರೆಸ್‍ನಲ್ಲಿದ್ದೆ. ಅವರು ಏನೇನು ಮಾಡುತ್ತಾರೆ ಎಂಬುದು ಗೊತ್ತಿದೆ. ಈ ಸಿಡಿಯನ್ನು ಅವರೇ ಮಾಡಿರುತ್ತಾರೆ. ಇನ್ಯಾರು ಮಾಡಲು ಸಾಧ್ಯ? ಸರ್ಕಾರ ಬೀಳಿಸಲು ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ ಎಂದಿದ್ದಾರೆ.

ಅವಮಾನವಾದರೆ ಹೊಣೆ ಯಾರು, ಅದಕ್ಕೆ ನಾವು ಮುನ್ನೆಚ್ಚರಿಕೆ ಕ್ರಮವಾಗಿ ನ್ಯಾಯಾಲಯಕ್ಕೆ ಹೋಗಿ ತಡೆ ತಂದಿದ್ದೇವೆ. ಚುನಾವಣಾ ಸಂದರ್ಭದಲ್ಲಿ ಈ ರೀತಿಯ ಹಲವು ಘಟನೆಗಳು ನಡೆದವು. ಜನ ನನ್ನ ಕೈ ಹಿಡಿದರು. ಅವರಿಗೆ ತಾಕತ್ತಿದ್ದರೆ ನನ್ನ ಕ್ಷೇತ್ರ ಹಾಗೂ ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿ ನಿಂತು ಗೆಲ್ಲಲಿ. ಅದನ್ನು ಬಿಟ್ಟು ಇಂತಹ ಕೆಲಸಗಳನ್ನು ಮಾಡಬಾರದು ಎಂದು ಹೇಳಿದರು.

ರಮೇಶ್ ಜಾರಕಿಹೊಳಿ ಅವರದ್ದೆನ್ನಲಾದ ಸಿಡಿ ಬಯಲಿಗೆ ಬರುತ್ತಿದ್ದಂತೆ ಸಚಿವರಾದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ, ನಾರಾಯಣಗೌಡ, ಡಾ.ಕೆ.ಸುಧಾಕರ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್ ಅವರು ತಮ್ಮ ವಿರುದ್ಧ ನಿಂದನಾತ್ಮಕ ಸುದ್ದಿಗಳನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ. ಅವರು ನ್ಯಾಯಾಲಯದ ಮೊರೆ ಹೋಗಿರುವುದನ್ನು ಪ್ರತಿಪಕ್ಷ ಕಾಂಗ್ರೆಸ್ ಆಕ್ಷೇಪಿಸಿ ಸದನದಲ್ಲಿ ಈ ಸಚಿವರುಗಳಿಂದ ಉತ್ತರ ಬಯಸುವುದಿಲ್ಲ ಎಂದು ಪ್ರಶ್ನೋತ್ತರವನ್ನು ಬಹಿಷ್ಕರಿಸಿತ್ತು.

ಇಂದು ಕೆಂಡಾಮಂಡಲವಾದ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ವಿರುದ್ಧ ತಿರಗಿಬಿದ್ದಿದ್ದು, ಈ ಸಂಬಂಧ ಅವಕಾಶ ನೀಡಿದರೆ ಸದನದಲ್ಲೇ ಉತ್ತರ ನೀಡುತ್ತೇವೆ. ಈ ಕೃತ್ಯವನ್ನು ಮಾಡಿರುವುದು ಕಾಂಗ್ರೆಸ್‍ನವರೇ ಎಂದು ನೇರವಾಗಿ ಆರೋಪಿಸಿದರಲ್ಲದೆ, ನೇರಾನೇರ ಕದನಕ್ಕೆ ಇಳಿಯಬೇಕು. ಅದನ್ನು ಬಿಟ್ಟು ಇಂತಹ ಹೀನ ಕೆಲಸಗಳನ್ನು ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾರು ಏನು ಮಾಡಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕು. ಅದಕ್ಕಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ನಾವು ಒತ್ತಾಯಿಸಿದ್ದೇವೆ ಎಂದು ಸೋಮಶೇಖರ್ ತಿಳಿಸಿದರು. (ಎಂ.ಎನ್)

Leave a Reply

comments

Related Articles

error: