ಪ್ರಮುಖ ಸುದ್ದಿಮನರಂಜನೆಮೈಸೂರು

ಪ್ರೇಕ್ಷಕರ ಕರತಾಡನದ ನಡುವೆ ‘ ಪರ್ವ’ ನಾಟಕ ಪ್ರದರ್ಶನಕ್ಕೆ ವಿದ್ಯುಕ್ತ ಚಾಲನೆ ನೀಡಿದ ಸಾಹಿತಿ ಡಾ.ಎಸ್.ಎಲ್.ಭೈರಪ್ಪ

ಮೈಸೂರು,ಮಾ.12:-ಇಂದು ಕಲಾಮಂದಿರದ ತುಂಬೆಲ್ಲ ಸಂಭ್ರಮ, ಸಂತಸದ ವಾತಾವರಣ, ಕಾರಣವಿಷ್ಟೇ ಹಲವು ದಿನಗಳಿಂದ ‘ಪರ್ವ’ ದ ರಸದೌತಣವನ್ನು ಪ್ರೇಕ್ಷಕರಿಗೆ ಉಣಬಡಿಸಲು ತಯಾರಿ ನಡೆಸಿದ್ದ ರಂಗಾಯಣದ ನಿರ್ದೇಶಕರು, ಕೊನೆಗೂ  ‘ಪರ್ವ’ವನ್ನು ಪ್ರೇಕ್ಷಕನ ಎದುರು ತಂದು ನಿಲ್ಲಿಸಿದ್ದಾರೆ.

ಕಲಾಮಂದಿರದಲ್ಲಿಂದು    ಸರಸ್ವತಿ ಸಮ್ಮಾನ್ ಪುರಸ್ಕೃತ ಖ್ಯಾತ ಸಾಹಿತಿ  ಡಾ.ಎಸ್.ಎಲ್ ಭೈರಪ್ಪ ರಚಿತ ‘ಪರ್ವ’ ಕಾದಂಬರಿಯ ಮಹಾ ರಂಗಪ್ರಸ್ತುತಿಯ ವಿಶೇಷ ಪ್ರದರ್ಶನಕ್ಕೆ ಪ್ರೇಕ್ಷಕರ ಕರತಾಡನದ ನಡುವೆಯೇ ಸಾಹಿತಿ ಡಾ.ಎಸ್.ಎಲ್ ಭೈರಪ್ಪನವರು ಇಂದು ವಿದ್ಯುಕ್ತ ಚಾಲನೆ ನೀಡಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ‘ಪರ್ವ’ ನಾಟಕವಾಗಿ ಬಂದಿರೋದು ತುಂಬಾ ಚೆನ್ನಾಗಿದೆ. ಈ ಮೊದಲು ರಿಹರ್ಸಲ್ ನೋಡಿದ್ದೆ, ರಿಹರ್ಸಲ್ ನೋಡಿದ್ದಕ್ಕಿಂತ ಇದು ಬಹಳ ಸುಧಾರಿಸಿದೆ.  ಒಂದಕ್ಕೊಂದಕ್ಕೆ ದೃಶ್ಯಗಳು ಎಲ್ಲವೂ ಇಲ್ಲಿಂದ ಅಲ್ಲಿಗೆ ಹೋಗೋದು, ಅಲ್ಲಿಂದ ಇಲ್ಲಿಗೆ ಹೋಗೋದು ಅದರ ಸಮಯ ಕೂಡ ಚೆನ್ನಾಗಿ ನಿಭಾಯಿಸಿದ್ದಾರೆ. ಸಂಭಾಷಣೆಗಳನ್ನು   ಕೂಡ ಎಷ್ಟು ಬೇಕೋ ಅಷ್ಟನ್ನೇ ಇಟ್ಟುಕೊಂಡಿದ್ದಾರೆ. ನಟನಟಿಯರೂ(ಕಲಾವಿದರು) ಕೂಡ ಚೆನ್ನಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ.   ನಿರ್ದೇಶಕ ಪ್ರಕಾಶ್ ಬೆಳವಾಡಿಯವರು ರಿಹರ್ಸಲ್ ನಲ್ಲೇ ಕಲಾವಿದರು ಯಾವ ರೀತಿ ನಟನೆ ಮಾಡಬೇಕು ನಟನಟಿಯರು ಏನೇನು ಮಾಡಬೇಕು ಎನ್ನುವುದನ್ನು ತಾವೇ ಮಾಡಿ ಮಾಡಿ ತೋರಿಸಿದ್ದಾರೆ. ನನಗಂತೂ ತುಂಬಾ ಸಂತೋಷವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ನಾಟಕ ಮೀಡಿಯಮ್ ಬೇರೆಯೇ ಇದೆ. ಕಾದಂಬರಿಯ ಮೀಡಿಯಂ ಬೇರೆ ಇದೆ. ನಾಟಕ ಕಾದಂಬರಿ ಬೇಸ್ ಆದರೂ ಕೂಡ ಇವರ ನೈಜತೆ ಬೇರೆಯೇ ಇರತ್ತೆ. ತುಂಬಾನೇ ಸಂತೋಷವಾಗಿದೆ. ನಮ್ಮ ಕಲ್ಪನೆಯಲ್ಲಿ ಏನೋ ಇರತ್ತೆ. ಅದನ್ನೇ ಸೃಷ್ಟಿ ಮಾಡಬೇಕು ಅನ್ನೋದೇನಿದೆ. ಅದಕ್ಕೆ ತಕ್ಕಂತೆ ವ್ಯಕ್ತಿ, ಮುಖ ಎಲ್ಲಿ ಬರಲು ಸಾಧ್ಯ, ಅವರೇನು ತೋರಿಸುತ್ತಾರೋ ಅದನ್ನು ನಾವು ಸ್ವೀಕರಿಸಬೇಕು ಎಂದರು.

ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ ಕಾರ್ಯಪ್ಪ ಮಾತನಾಡಿ ವೀಕ್ಷಕರನ್ನು ಮಾತನಾಡಿಸುತ್ತೇವೆ. ನಿಮಗೆ ಯಾವ ರೀತಿಯ ಅನುಭವವವಾಗಿದೆ ಎನ್ನುವುದನ್ನು ಕೇಳುತ್ತೇವೆ. ಇದು ಮೊದಲ ಭಾಗವಾಯಿತು, ಇನ್ನು ಉಳಿದ ಭಾಗಗಳು ಎರಡನೇ ಅಂಕ, ಮೂರನೇ ಅಂಕ, ನಾಲ್ಕನೇ ಅಂಕ, ಐದನೇ ಅಂಕ ಇನ್ನೂ ಐದು ಅಂಕಗಳು ಉಳಿದಿದೆ. ಈ ಐದು ಅಂಕಗಳಲ್ಲಿ ಬಹಳ ರೋಚಕವಾದ ಸನ್ನಿವೇಶಗಳಿವೆ. ಪ್ರಾರಂಭದಲ್ಲಿ ನಾವು ಕಥೆ ಹೇಳುವ ಆದಿಪರ್ವ ಇಟ್ಟಿದ್ದೆವು. ಇನ್ನು ಬರುವ ನಿಯೋಗ ಪರ್ವ, ಯುದ್ಧ ಪರ್ವ, ಅದ್ಭುತವಾಗಿದೆ.ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ಕುತೂಹಲದಿಂದ ನಿರೀಕ್ಷೆ ಮಾಡುತ್ತಿದ್ದೇವೆ. ನಮಗಂತೂ ರಂಗಾಯಣಕ್ಕೆ ಇಂದು ಪರ್ವದ ಹಬ್ಬ ಎಂದು ಸಂತಸ ವ್ಯಕ್ತಪಡಿಸಿದರು.

ನಿರ್ದೇಶಕ ಪ್ರಕಾಶ್ ಬೆಳವಾಡಿ ಪ್ರತಿಕ್ರಿಯಿಸಿ ಮೊದಲನೆ ಅಂಕ ಮುಗಿದಿದೆ. ಈಗ ಉಸಿರಾಡಲು ಆರಂಭಿಸಿದ್ದೇನೆ ಅಷ್ಟೇ. ಆರಂಭದಲ್ಲಿ ಆತಂಕವಿತ್ತು. ಈಗ ಪ್ರೇಕ್ಷಕರು ಸ್ವಾಗತಿಸುತ್ತಾರೆಂಬ ಭರವಸೆ ಇದೆ. ನಾಲ್ಕು ಅಂಕವನ್ನು ಕುಳಿತು ನೋಡಬೇಕು ಅವರು. ಅದಕ್ಕೆ ಕಾಯಬೇಕು ಅಷ್ಟೇ, ನಾನು ಥಿಯೇಟರ್ ಆಚೆ ಸುತ್ತಾಡುತ್ತಿದ್ದೇನೆ. ಒಳಗಡೆ ಹೇಗಿದೆ ಅಂತ ನನಗೇ ಗೊತ್ತಿಲ್ಲ. ಕಲಾವಿದರು ಪ್ರೇಕ್ಷಕರು ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆಂದು   ಹೇಳಿದರು ಎಂದು ನಗುನಗುತ್ತಲೇ ಉತ್ತರಿಸಿದರು.

ನಾಟಕ ಸಂಜೆ 6ಗಂಟೆಯವರೆಗೂ ಪ್ರದರ್ಶನವಿರಲಿದ್ದು, ಮಾ.13 ಮತ್ತು 14ರಂದು ಕೂಡ ಪ್ರದರ್ಶನಗೊಳ್ಳಲಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: