ಮೈಸೂರು

ವಿಜಯ ವಿಠ್ಠಲ ಕಾಲೇಜಿನಲ್ಲಿ ವಿಜ್ಞಾನ ಸಂಘದ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ

ಮೈಸೂರು,ಮಾ.12:- ಮೈಸೂರಿನ ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನಲ್ಲಿ “ಆದಿತ್ಯ – ಎಲ್1 ಮಿಷನ್” ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಎ. ಮೋಹನ ಕೃಷ್ಣ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ವಿವಿಧ ಭಾರತೀಯ ಸಂಶೋಧನಾ ಸಂಸ್ಥೆಗಳ ಸಹಯೋಗದೊಂದಿಗೆ ನಿರ್ಮಿಸಲಾದ ಸೂರ್ಯನನ್ನು ಅಧ್ಯಯನ ಮಾಡುವ ಬಾಹ್ಯಾಕಾಶ ನೌಕೆ ಆದಿತ್ಯ – ಎಲ್1 ಕುರಿತು ಮಾಹಿತಿ ನೀಡಿದರು. ಆದಿತ್ಯ – ಎಲ್1 ಮಿಷನ್ ರಚನೆ ಮತ್ತು ಕಾರ್ಯವೈಖರಿಯ ಕುರಿತು ಮಾತನಾಡಿ ಅಂತರಿಕ್ಷಕ್ಕೆ ಇದನ್ನು ಕಳುಹಿಸುವ ಉದ್ದೇಶ ಸೌರಮಂಡಲದಲ್ಲಿರುವ ಅನಿಲಗಳು, ಸೌರಪದರ ಕರೋನಾದ ಅಧ್ಯಯನ ಮತ್ತು ವೀಕ್ಷಣೆ, ಸೂರ್ಯನ ವಿಕಿರಣ ಮತ್ತು ಕ್ರಿಯಾತ್ಮಕ ಪ್ರಕ್ರಿಯೆಗಳ ಸಮಗ್ರ ತಿಳುವಳಿಕೆ, ಬಾಹ್ಯಾಕಾಶ ಹವಾಮಾನ ಮತ್ತು ಭೂಮಿಯ ಹವಾಮಾನದ ಮೇಲೆ ಆಗುವ ಪರಿಣಾಮಗಳು, ಸೌರಮಾರುತಗಳು, ಕಾಂತಕ್ಷೇತ್ರದ ಪ್ರಮಾಣ ಹಾಗೂ ಸ್ವರೂಪವನ್ನು ಅಳೆಯುವಂತಹ ಅತ್ಯಮೂಲ್ಯ ಅನ್ವೇಷಣೆಗಳನ್ನು ಮಾಡುವ ಉದ್ದೇಶದಿಂದ ಉಡಾವಣೆ ಮಾಡಲಾಗುತ್ತದೆ ಎನ್ನುವುದನ್ನು ಪ್ರಾತ್ಯಕ್ಷತೆಯ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು. ಖಗೋಳ ವಿಜ್ಞಾನದ ಅಧ್ಯಯನದ ಮಹತ್ವವನ್ನು ತಿಳಿಸಿ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಿಗೆ ಭೇಟಿ ನೀಡಿ ಎಂದು ತಿಳಿಸಿ ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ವೈಜ್ಞಾನಿಕ ಸಂದೇಹಗಳ ಬಗ್ಗೆ ಹಲವಾರು ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎಚ್. ಸತ್ಯಪ್ರಸಾದ್‍ ಪ್ರಾಸ್ತಾವಿಕ ನುಡಿಯಲ್ಲಿ ವಿಜ್ಞಾನ ಸಂಘದ ಉದ್ದೇಶ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸುತ್ತ ವಿದ್ಯಾರ್ಥಿಗಳು ಕೇವಲ ಪರೀಕ್ಷೆ ದೃಷ್ಟಿಯಿಂದ ಮಾತ್ರ ವಿಜ್ಞಾನ ವಿಷಯವನ್ನು ಓದದೆ ಓದಿದ್ದನ್ನು ವಿಶ್ಲೇಷಿಸಿ, ಪ್ರಶ್ನಿಸಿ ಹಲವು ಆಯಾಮಗಳಲ್ಲಿ ಅದನ್ನು ಅರಿಯುವ ಪ್ರಯತ್ನವನ್ನು ಮಾಡಿದಾಗ ಮಾತ್ರ ವಿಶೇಷ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ವಿಜ್ಞಾನ ಸಂಘದ ಸಂಚಾಲಕರಾದ ರೂಪಾ.ಆರ್ ಮತ್ತು ಆರ್. ಎಂ. ನವೀನ್ ಕುಮಾರ್ ಉಪಸ್ಥಿತರಿದ್ದರು. ಶೃತಿ.ಪಿ.ಬಿ ಪ್ರಾರ್ಥಿಸಿ, ಸಮನ್ವಿತ ಎಸ್. ಸ್ವಾಗತಿಸಿ, ನೇಸರ ಅಮಿನ್‍ ಗಡ್ ಅತಿಥಿಗಳನ್ನು ಪರಿಚಯಿಸಿ, ಆರ್ಯವ್ ಹೆಗ್ಡೆ ವಂದನಾರ್ಪಣೆ ಮಾಡಿ ಮೊನಾಲಿಸಾ ಎಂ.ವಿ. ಕಾರ್ಯಕ್ರಮವನ್ನು ನಿರೂಪಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: