ಮೈಸೂರು

ಕುಲಸಚಿವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

ಪ್ರಭಾರ ಕುಲಪತಿ ಮತ್ತು  ಹಾಸ್ಟೆಲ್ ವಿದ್ಯಾರ್ಥಿನಿಯರ ಬಗ್ಗೆ ಅಪಪ್ರಚಾರ ಮಾಡಿ ಮೈಸೂರು ವಿವಿಯ ಘನತೆಗೆ ಧಕ್ಕೆ ತರುತ್ತಿರುವ ಕುಲಸಚಿವ ಪ್ರೊ.ಆರ್.ರಾಜಣ್ಣನವರನ್ನು ವಜಾಗೊಳಿಸಲು ಆಗ್ರಹಿಸಿ ಗುರುವಾರ ಮಾನಸಗಂಗೋತ್ರಿಯ ಕ್ಲಾಕ್ ಟವರ್ ಬಳಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ  ಏ.1 ರಂದು ವಿದ್ಯಾರ್ಥಿನಿಯರು ಕುಲಪತಿಗಳನ್ನು ಭೇಟಿ ಮಾಡಿ ಹಾಸ್ಟೆಲ್ ನಲ್ಲಿರುವ  ತಮ್ಮ ಮೂಲಭೂತ ಸಮಸ್ಯೆಗಳನ್ನು ತಿಳಿಸಿ ಮನವಿ ಸಲ್ಲಿಸಿದ್ದೆವು. ಏ.12 ರಂದು ಪ್ರಭಾರ ಕುಲಪತಿ ದಯಾನಂದ ಮಾನೆ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್ ಗಳಿಗೆ ಪರಿಶೀಲನೆಗಾಗಿ ಇತರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದರು. ಇದನ್ನೇ ತಮ್ಮ ಅನುಕೂಲಕ್ಕಾಗಿ ಬಳಸಿಕೊಂಡಿರುವ ಹಾಸ್ಟೆಲ್ ವಾರ್ಡನ್ ಪ್ರೊ.ರೇಖಾ ಜಾಧವ್ ಮತ್ತು ಕುಲಸಚಿವ ಪ್ರೊ.ರಾಜಣ್ಣ ಅವರು ಸಿಸಿ ಟಿವಿಯ ಎಲ್ಲಾ ದೃಶ್ಯಗಳನ್ನು ಮಾಧ‍್ಯಮಗಳಿಗೆ ನೀಡದೆ ಪ್ರೊ.ಮಾನೆ ಅವರ ಬಗ್ಗೆ ಅಪಪ್ರಚಾರ ಮಾಡಬೇಕೆಂಬ ದುರುದ್ದೇಶದಿಂದ ವಿವಾದ ಸೃಷ್ಟಿಸಬೇಕಾದಷ್ಟು ದೃಶ್ಯಾವಳಿಯನ್ನು ಮಾತ್ರ ನೀಡಿದ್ದಾರೆ ಎಂದು ದೂರಿದರು.

ಒಬ್ಬ ಹಿರಿಯ ದಲಿತ ಪ್ರಾಧ‍್ಯಾಪಕರ ಕಾರ್ಯವೈಖರಿಯನ್ನು ಸಹಿಸದ ಇವರು ಕುಲಪತಿಗಳ ಚಾರಿತ್ರ್ಯ ಹರಣ ಮಾಡುವುದರ ಜೊತೆಗೆ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ಸುದ್ದಿವಾಹಿನಿಗಳಲ್ಲಿ ಹಾಸ್ಟೆಲ್  ವಿದ್ಯಾರ್ಥಿ ನಿಲಯದ ಬಗ್ಗೆ ತಪ್ಪು ಹೇಳಿಕೆಗಳನ್ನು ನೀಡುತ್ತಿರುವ ಕುಲಸಚಿವರು ವಿದ್ಯಾರ್ಥಿನಿಯರಿಗೆ ಮಾನಸಿಕ ಕಿರಿಕಿರಿ ಉಂಟಾಗುವಂತೆ ಮಾಡಿದ್ದಾರೆ. ಹೀಗಾಗಿ ಮೈಸೂರು ವಿವಿ ಮತ್ತು  ವಿದ್ಯಾರ್ಥಿನಿಯರ ಘನತೆಗೆ ಧಕ್ಕೆ ತಂದು ಅಪಪ್ರಚಾರ ಮಾಡುತ್ತಿರುವ ಕುಲಸಚಿವ ಪ್ರೊ.ಆರ್.ರಾಜಣ್ಣ ಅವರನ್ನು ಈ ಕೂಡಲೇ ಆ ಹುದ್ದೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. (ಕೆ.ಎಸ್-ಎಲ್.ಜಿ)

 

 

 

Leave a Reply

comments

Related Articles

error: