
ಕರ್ನಾಟಕಪ್ರಮುಖ ಸುದ್ದಿ
ಜಾರಕಿಹೊಳಿ ಸಿಡಿ ಬೆಂಗಳೂರಿನಲ್ಲೇ ಅಪ್ಲೋಡ್: ಮೂಲ ಪತ್ತೆಗೆ ಮುಂದಾದ ಎಸ್ಐಟಿ
ಬೆಂಗಳೂರು,ಮಾ.13-ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣದ ತನಿಖೆಯನ್ನು ಎಸ್ಐಟಿ ತಂಡ ಕೈಗೆತ್ತಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
ವಿಡಿಯೋವನ್ನು ಬೆಂಗಳೂರಿನಲ್ಲೇ ಕುಳಿತು ರಷ್ಯಾದಿಂದ ಅಪ್ಲೋಡ್ ಮಾಡಿರುವಂತೆ ಪ್ರಾಕ್ಸಿ ಸರ್ವರ್ ಬಳಸಿ ಯುಟ್ಯೂಬ್ಗೆ ಅಪ್ಲೋಡ್ ಮಾಡಲಾಗಿತ್ತು. ಸೈಬರ್ ತಜ್ಞರು ವಿಡಿಯೋ ಅಪ್ಲೋಡ್ ಮೂಲಕ್ಕೆ ಕೈ ಹಾಕಿದಾಗ ಅದು ಬೆಂಗಳೂರಿನಿಂದಲೇ ಅಪ್ಲೋಡ್ ಮಾಡಲಾಗಿದೆ ಎಂದು ಗೊತ್ತಾಗಿದೆ. ಇದರ ಮೂಲ ಪತ್ತೆಗೆ ಎಸ್ಐಟಿ ತಂಡ ಮುಂದಾಗಿದೆ.
ಸಿ.ಡಿ ಸೋರಿಕೆ, ಪ್ರಸರಣ, ದಿನೇಶ್ ಕಲ್ಲಹಳ್ಳಿಗೆ ನೀಡಿರುವುದೂ ಸೇರಿದಂತೆ ಸಿ.ಡಿ ಹಂಚಿಕೆ ಸಂಬಂಧ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಮಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿನ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗಿದೆ.
ಕೆಲವರನ್ನು ಎಸ್ಐಟಿ ತಂಡ ಕರೆ ತಂದರೆ, ಮತ್ತೆ ಕೆಲವರು ತಾವಾಗಿಯೇ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ. ಮಾ.2ರಂದು ಕೆಲವು ಮಾಧ್ಯಮದವರಿಗೆ ರಮೇಶ್ ಜಾರಕಿಹೊಳಿ ಅವರ ಕ್ಲಿಪ್ಪಿಂಗ್, ಫೋಟೊಗಳನ್ನು ವಾಟ್ಸ್ಆ್ಯಪ್ ಮಾಡಿದ್ದ ದಿನೇಶ್ ಕಲ್ಲಹಳ್ಳಿ ಅವರನ್ನು ಕೂಡ ಶೀಘ್ರದಲ್ಲೇ ವಿಚಾರಣೆ ನಡೆಸಲಾಗುತ್ತದೆ. (ಎಂ.ಎನ್)