ದೇಶಪ್ರಮುಖ ಸುದ್ದಿ

ತಮಿಳುನಾಡು ವಿಧಾನಸಭೆ ಚುನಾವಣೆ: ಚೆಪಾಕ್‌ ಕ್ಷೇತ್ರದಿಂದ ಉದಯನಿಧಿ ಸ್ಟಾಲಿನ್‌ ಸ್ಪರ್ಧೆ

ಚೆನ್ನೈ,ಮಾ.13-ಡಿಎಂಕೆ ವರಿಷ್ಠ ನಾಯಕ ಎಂ.ಕೆ.ಸ್ಟಾಲಿನ್‌ ಅವರ ಪುತ್ರ ಹಾಗೂ ಡಿಎಂಕೆ ಯುವ ಘಟಕದ ಮುಖ್ಯಸ್ಥ ಉದಯನಿಧಿ ಸ್ಟಾಲಿನ್‌ ಅವರು ಚೆಪಾಕ್‌ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಕೊಳತ್ತೂರು ಕ್ಷೇತ್ರದಿಂದಲೇ ಸ್ಟಾಲಿನ್‌ ಪುನರಾಯ್ಕೆ ಬಯಸಿದ್ದಾರೆ. ಉಪ ಮುಖ್ಯಮಂತ್ರಿ ಓ.ಪನ್ನೀರ್‌ ಸೆಲ್ವಂ ಸ್ಪರ್ಧಿಸಿರುವ ಭೋದಿನಾಯಕನೂರು ಕ್ಷೇತ್ರದಿಂದ ಟಿ.ತಮಿಳ್‌ ಸೆಲ್ವನ್‌ ಡಿಎಂಕೆ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಸೆಲ್ವನ್‌ ಅವರು ಥೇಣಿ ಕ್ಷೇತ್ರದಲ್ಲಿ ಸೆಲ್ವಂ ಪುತ್ರನ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

ಸ್ಟಾಲಿನ್‌ ಅವರು ಕರುಣಾನಿಧಿ ಅವರ ಸಮಾಧಿಗೆ ತೆರಳಿ ಪಟ್ಟಿಯನ್ನು ಸಮಾಧಿ ಮೇಲಿಟ್ಟು ಪ್ರಾರ್ಥನೆ ಸಲ್ಲಿಸಿದ ಬಳಿಕ ಪಕ್ಷದ 173 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಹಿರಿಯ ನಾಯಕ ಟಿ.ಆರ್‌.ಬಾಲು ಅವರ ಪುತ್ರ ಟಿ.ಆರ್‌.ಬಿ. ರಾಜಾ ಅವರಿಗೆ ಮುನ್ನಾರ್‌ಗುಡಿ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ವೈಕೊ ಅವರ ಎಂಡಿಎಂಕೆಯ ಆರು ಮತ್ತು ಇತರ ಸಣ್ಣಪುಟ್ಟ ಪಕ್ಷಗಳ ಎಂಟು ಅಭ್ಯರ್ಥಿಗಳು ಸಹ ಡಿಎಂಕೆ ಚಿಹ್ನೆ ಅಡಿಯಲ್ಲಿಯೇ ಸ್ಪರ್ಧಿ ಸಲಿದ್ದಾರೆ. ಡಿಎಂಕೆ ಚಿಹ್ನೆಯಲ್ಲಿ ಒಟ್ಟು 187 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಆದರೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ನಾವು ಎಲ್ಲ 234 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ ಎಂಬ ಭಾವನೆಯಿಂದಲೇ ಕೆಲಸ ಮಾಡಬೇಕು. ತಲೈವರ್‌ ಕಲೈಗ್ನರ್‌ (ಎಂ.ಕರುಣಾನಿಧಿ) ನಮ್ಮೊಂದಿಗೇ ಇದ್ದಾರೆ ಎಂಬುದಾಗಿ ಭಾವಿಸಿಕೊಂಡು ಪಕ್ಷದ ಯಶಸ್ಸಿಗಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಕೋವಿಲಪಟ್ಟಿಯಿಂದ ದಿನಕರನ್ಸ್ಪರ್ಧೆ: ಅಮ್ಮಾ ಮಕ್ಕಳ ಮುನ್ನೇತ್ರ ಕಳಗಂ (ಎಎಂಎಂಕೆ) ಮುಖ್ಯಸ್ಥ ಟಿ.ಟಿ.ವಿ. ದಿನಕರನ್‌ ಅವರು ಕೋವಿಲಪಟ್ಟಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ತಾವೂ ಸೇರಿದಂತೆ 130 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ದಿನಕರನ್‌ ಬಿಡುಗಡೆ ಮಾಡಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: