ಮೈಸೂರು

ತಾಯಿ ಚಾಮುಂಡಿಯ ಸನ್ನಿಧಿಯಲ್ಲಿ ಸರಳ ಸಾಮೂಹಿಕ ವಿವಾಹ : ದಾಂಪತ್ಯ ಜೀವನಕ್ಕೆ ಕಾಲಿರಿಸಿದ 14ಜೋಡಿ

ಮೈಸೂರು,ಮಾ.15:-  ನಾಡಿನ ಅಧಿದೇವತೆ  ಚಾಮುಂಡೇಶ್ವರಿ ನೆಲೆ ನಿಂತಿರುವ ಮೈಸೂರಿನ ಚಾಮುಂಡಿ ಬೆಟ್ಟದ ಅಮ್ಮನವರ ಸನ್ನಿಧಿಯಲ್ಲಿ ಇಂದು ಸರಳ ಸಾಮೂಹಿಕ ವಿವಾಹಕ್ಕೆ ಚಾಲನೆ ನೀಡಲಾಯಿತು.

ಶಕ್ತಿದೇವತೆಯ ಸನ್ನಿಧಿಯಲ್ಲಿ ದಾಂಪತ್ಯ ಜೀವನಕ್ಕೆ  14 ಜೋಡಿ ಕಾಲಿರಿಸಿದೆ. ಧಾರ್ಮಿಕ ದತ್ತಿ ಇಲಾಖೆಯ  ಸಪ್ತಪದಿ ಕಾರ್ಯಕ್ರಮದಡಿಯಲ್ಲಿ   ಸಾಮೂಹಿಕ ವಿವಾಹ ನಡೆದಿದ್ದು, ವೇದ ಘೋಷ ಮಂತ್ರಗಳ ನಡುವೆ ನೂತನ ವಧುವರರಿಗೆ ಆಶೀರ್ವದಿಸಲಾಗಿದೆ. ಚಾಮುಂಡಿಬೆಟ್ಟದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ   ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆದಿದ್ದು, ಮೈಸೂರು ಜಿಲ್ಲೆಯ ವಿವಿಧ ಭಾಗಗಳಿಂದ  ನವ ಜೋಡಿಗಳು ಆಗಮಿಸಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಜಿ. ಟಿ. ದೇವೇಗೌಡ ಚಾಲನೆ ನೀಡಿದರು. ನೂತನ ವಧುವರರಿಗೆ ಅಕ್ಷತೆ ಹಾಕಿ ಆಶೀರ್ವದಿಸಿದರು.

ಸಾಮೂಹಿಕ ವಿವಾಹ ಬಂಧನಕ್ಕೆ ಒಳಗಾದ ವಧುವಿಗೆ 40ಸಾವಿರ ರೂ. ಮೌಲ್ಯದ ಮಾಂಗಲ್ಯ, ವಸ್ತ್ರ ಖರೀದಿಗಾಗಿ ವಧುವಿಗೆ 10ಸಾವಿರ, ವರನಿಗೆ 5ಸಾವಿರ ನೀಡಲಾಗಿದೆ. ಇದಲ್ಲದೆ ಪರಿಶಿಷ್ಟ ಜಾತಿ ಪಂಗಡಕ್ಕೆ ಸೇರಿದ ಜೋಡಿಗೆ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 50ಸಾವಿರ, ಸಾಮಾನ್ಯ ವರ್ಗದ ಜೋಡಿಗೆ ಆದರ್ಶ ವಿವಾಹ ಯೋಜನೆಯಡಿ ಕಂದಾಯ ಇಲಾಖೆ ತಲಾ ಹತ್ತು ಸಾವಿರ ಪ್ರೋತ್ಸಾಹಧನ ನೀಡಿದೆ ಎನ್ನಲಾಗಿದೆ.

ಶಾಸಕ ಜಿ. ಟಿ. ದೇವೇಗೌಡ ಅವರ ಜೊತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳಾ ಶ್ಯಾಂ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: