ಮೈಸೂರು

ರೈತ ಹೋರಾಟ ತೀವ್ರಗೊಳಿಸಲು ‘ಮಹಾಪಂಚಾಯತ್’ ಆಯೋಜನೆ : ಚುಕ್ಕಿ ನಂಜುಂಡಸ್ವಾಮಿ ಮಾಹಿತಿ

ಮೈಸೂರು,ಮಾ.15:-  ನವದೆಹಲಿಯಲ್ಲಿ ನಡೆಯುತ್ತಿರುವ ರೈತರ ಚಳವಳಿಯನ್ನು ಬೆಂಬಲಿಸಿ ರಾಜ್ಯದಲ್ಲಿಯೂ ರೈತ ಹೋರಾಟವನ್ನು ತೀವ್ರಗೊಳಿಸುವ ಉದ್ದೇಶದಿಂದ ‘ಮಹಾಪಂಚಾಯತ್’ಗಳನ್ನು ಆಯೋಜಿಸಲಾಗುತ್ತಿದೆ ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ನಾಯಕರಾದ ಚುಕ್ಕಿ ನಂಜುಂಡಸ್ವಾಮಿ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋರಾಟವನ್ನು ತೀವ್ರಗೊಳಿಸುವ ಉದ್ದೇಶದಿಂದ ರೂಪಿಸಿರುವ ‘ಮಹಾಪಂಚಾಯತ್’ ಸಭೆಗಳು ಮಾ.20ರಂದು ಶಿವಮೊಗ್ಗದಲ್ಲಿ ಮೊದಲ ಮಹಾಪಂಚಾಯತ್ ನಡೆದರೆ, ಮಾ.21ರಂದು ಹಾವೇರಿ ಮತ್ತು ಮಾ.31ರಂದು ಬೆಳಗಾವಿಯಲ್ಲಿ ಮಹಾಪಂಚಾಯತ್ ನಡೆಯಲಿದೆ.
ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರ ನಾಯಕರಾದ ರಾಕೇಶ್ ಟಿಕಾಯತ್, ಯದುವೀರ್ ಸಿಂಗ್, ಡಾ.ದರ್ಶನ್ ಪಾಲ್ ಮಹಾಮಂಚಾಯತ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಎಲ್ಲ ರೈತಪರ ಸಂಘಟನೆಗಳು ಚರ್ಚಿಸಿ ಎಲ್ಲರನ್ನೂ ಒಗ್ಗೂಡಿಸಿ ಒಂದೇ ವೇದಿಕೆಯಲ್ಲಿ ಒಗ್ಗಟ್ಟಾಗಿ ಹೋರಾಟವನ್ನು ಮಾಡಲಾಗುತ್ತಿದೆ. ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ, ಐಕ್ಯ ಹೋರಾಟ ಕರ್ನಾಟಕ, ಸಂಯುಕ್ತ ಹೋರಾಟ ಕರ್ನಾಟಕ, ಅಖಂಡ ಕರ್ನಾಟಕ ರೈತ ಸಂಘ ಹಾಗೂ ದಲಿತ, ಕಾರ್ಮಿಕ ಮತ್ತು ರೈತ ಪರ ಸಂಘಟನೆಗಳು ಒಟ್ಟುಗೂಡಿ ಈ ಮಹಾಪಂಚಾಯತ್ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅವಕಾಶ ನೀಡದಿದ್ದರೂ ಮಹಾಪಂಚಾಯತ್ ಮಾಡುತ್ತೇವೆ: ಶಿವಮೊಗ್ಗ ಹಾಗೂ ಹಾವೇರಿಯಲ್ಲಿ ನಡೆಯುವ ಮಹಾಪಂಚಾತ್‌ಗಳಿಗೆ ಈಗಾಗಲೇ ಅವಕಾಶ ದೊರೆತಿದೆ. ಆದರೆ, ಬೆಳಗಾವಿಯಲ್ಲಿ ನಡೆಯುವ ಸಭೆಗೆ ಅವಕಾಶ ನೀಡಿಲ್ಲ. ಆದರೂ ಕೂಡ ನಾವು ಮಹಾಪಂಚಾಯತ್ ನಡೆಸಿ ನಡೆಸುತ್ತೇವೆ. ಹೊಸದಿಲ್ಲಿ ರೈತ ಹೋರಾಟದಲ್ಲಿ ೨೩೦ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಅವರ‍್ಯಾರೂ ಕೋವಿಡ್‌ನಿಂದ ನಿಧನರಾಗಿಲ್ಲ. ಮಹಾಪಂಚಾಯತ್‌ಗಳು ದೇಶದಲ್ಲಿ ಹೆಚ್ಚಿದಂತೆಲ್ಲ ಕೇಂದ್ರ ಸರ್ಕಾರದ ಸುಳ್ಳಿನ ಮುಖವಾಡ ಕಳಚಿ ಬೀಳುತ್ತಿದೆ.

ದೇಶದ ಜನರನ್ನು ತಪ್ಪುದಾರಿಗೆ ಎಳೆಯುತ್ತಿರುವ ಸರ್ಕಾರದ ನೀಚ ವರ್ತನೆಗೆ ಮಹಾಪಂಚಾಯತ್‌ಗಳು ಸೂಕ್ತ ಉತ್ತರ ನೀಡುತ್ತೇವೆ. ಹೀಗಾಗಿ ಇವುಗಳನ್ನು ತಡೆಯಲು ಸರ್ಕಾರ ಯತ್ನಿಸುತ್ತಿದೆ ಎಂದರು.
ಒಂದು ವೇಳೆ ಕೋವಿಡ್ ನೆಪ ಹೇಳಿ ರೈತ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿದರೆ, ಕುಂಭ ಮೇಳ ಮತ್ತು ವಿವಿಧ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆ ಸಮಾವೇಶಗಳನ್ನು ರದ್ದುಗೊಳಿಸಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಳೆದ ನಾಲ್ಕು ತಿಂಗಳಿಂದ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಪ್ರಾಣವನ್ನು ಲೆಕ್ಕಸದೇ ಚಳವಳಿಯಲ್ಲಿ ತೊಡಗಿದ್ದಾರೆ. ಆದರೆ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಯವರೆಗೂ ರೈತರೊಂದಿಗೆ ಮಾತುಕತೆ ನಡೆಸಿಲ್ಲ. ಅಂಬಾನಿ ಮಗಳ ಮದುವೆ ಹೋಗುತ್ತಾರೆ, ಅನುಷ್ಕಾ ಶರ್ಮಗೆ ಮಗು ಹುಟ್ಟಿದರೆ ಶುಭಾಶಯ ಕೋರುತ್ತಾರೆ. ಆದರೆ, ರೈತರೊಂದಿಗೆ ಮಾತುಕತೆ ನಡೆಸಲು ಅವಮಾನವೇ? ಎಂದು ಪ್ರಶ್ನಿಸಿದ ಅವರು ಕಿಂಚಿತ್ತು ಮಾನವೀಯ ಸ್ಪಂದನೆ ನೀಡದಿರುವ ಪ್ರಧಾನಿಯ ಧೋರಣೆಯನ್ನು ಜನರಿಗೆ ತಿಳಿಸಬೇಕು ಎಂದರು.

ಮಾ.26ರಂದು ಭಾರತ್ ಬಂದ್ ಕರೆ: ಕಳದೆ ನ.26ರ ಸಂವಿಧಾನ ದಿನದಂದು ಆರಂಭಗೊಂಡ ರೈತ ಚಳವಳಿಯು ಮಾ.26ಕ್ಕೆ ನಾಲ್ಕು ತಿಂಗಳು ಪೂರ್ಣಗೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಹೋರಾಟದ ತೀವ್ರತೆಗಾಗಿ ಮಾ.26 ಭಾರತ್ ಬಂದ್‌ಗೆ ಕರೆ ನೀಡಲಾಗಿದೆ ಎಂದು ವಿವರಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: