ಮೈಸೂರು

ಅನಧಿಕೃತ ಪಿಜಿ ಮೇಲೆ ದಾಳಿ:ಅಧಿಕಾರಿಗಳಿಂದ ಬೀಗ; ಸಿಟಿಟುಡೆ ವರದಿ ಫಲಶೃತಿ

ಮೈಸೂರು ಮಹಾನಗರ ಪಾಲಿಕೆ ಕೊನೆಗೂ ಎಚ್ಚೆತ್ತಿದ್ದು, ಎಲ್ಲೆಂದರಲ್ಲಿ ಅನಧಿಕೃತವಾಗಿ   ನಾಯಿಕೊಡೆಗಳಂತೆ ತಲೆಎತ್ತುತ್ತಿರುವ ಪೇಯಿಂಗ್ ಗೇಸ್ಟ್ ಅರ್ಥಾತ್ ಪಿಜಿಗಳ ಮೇಲೆ ದಾಳಿ ನಡೆಸುತ್ತಿದೆ. ಮೈಸೂರಿನ ಸರಸ್ವತಿಪುರಂನಲ್ಲಿರುವ ಕಾಮಾಕ್ಷಿ ಆಸ್ಪತ್ರೆ ಸಮೀಪದ ರೋಟರಿ ಶಾಲೆ ಎದುರು ಇರುವ ಪಿಜಿಯೊಂದಕ್ಕೆ ದಾಳಿ ನಡೆಸಿದ ಮೈಸೂರು ವಲಯ ಮೂರರ ಆಯುಕ್ತೆ ರೂಪಾ ನೇತೃತ್ವದ ತಂಡ ಪಿಜಿಗೆ ಬೀಗ ಜಡಿದಿದೆ.

ಏಪ್ರಿಲ್ 18ರಂದು ಸಿಟಿಟುಡೆ   “ನಾಯಿಕೊಡೆಗಳಂತೆ ಅನಧಿಕೃತವಾಗಿ  ತಲೆ ಎತ್ತುತ್ತಿವೆ ಪಿಜಿಗಳು: ಇಲ್ಲ ಭದ್ರತೆ; ಕೈಕಟ್ಟಿ ಕುಳಿತಿದೆ ಮಹಾನಗರಪಾಲಿಕೆ ” ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಸಿಟಿಟುಡೆ ಫಲಶೃತಿಯಾಗಿ ಗುರುವಾರ ಪಿಜಿಗಳ ಮೇಲೆ ಆಯುಕ್ತೆ ರೂಪಾ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.

ಪಿಜಿ ಅನಿಲ್ ಎಂಬವರಿಗೆ ಸೇರಿದ್ದಾಗಿದ್ದು, ಕ್ಯಾಟರಿಂಗ್ ನಡೆಸುವುದಾಗಿ ಅನುಮತಿ ಪಡೆದಿದ್ದರು. ಆದರೆ ಎರಡು ಮಹಡಿಯನ್ನು ನಿರ್ಮಿಸಿ ಅಲ್ಲಿಯೇ 60 ಮಕ್ಕಳನ್ನಿರಿಸಿ ಪಿಜಿ ನಡೆಸುತ್ತಿದ್ದರು. ಈ ಕುರಿತು ಸ್ಥಳೀಯರು ಅನೇಕ ಬಾರಿ ಮಹಾನಗರಪಾಲಿಕೆಗೆ ದೂರು ನೀಡಿದ್ದರು ಎನ್ನಲಾಗಿದೆ. ಗುರುವಾರ ಆಯುಕ್ತೆ ರೂಪಾ ನೇತೃತ್ವದ ತಂಡ ದಾಳಿ ನಡೆಸುತ್ತಿದ್ದಂತೆ ಅನಿಲ್ ಆಯುಕ್ತರ  ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೇ ನನಗೆ ರಾಜಕೀಯ ಮುಖಂಡರ ಪರಿಚಯವಿದೆ, ಮೇಲಧಿಕಾರಿಗಳ ಪರಿಚಯವಿದೆ ಎಂದೆಲ್ಲ ಹೇಳಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತು ಆಯುಕ್ತರು ಸರಸ್ವತಿಪುರಂ ಠಾಣೆಯಲ್ಲಿ  ಅನಿಲ್  ವಿರುದ್ಧ ದೂರು ದಾಖಲಿಸಿದ್ದಾರೆ.

ಅಕ್ಕಪಕ್ಕದ ಮನೆಯವರು ರೂಪಾ ಅವರನ್ನು ಬೆಂಬಲಿಸಿದ್ದು ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ. ಇಲ್ಲಿ ಎಲ್ಲ ಹುಡುಗರೇ ಇರೋದು.      ಎಷ್ಟೋ ಹೊತ್ತಿಗೆಲ್ಲ ಬರೋರು. ಇದರಿಂದ  ನಮಗೆ ಹೊರಗಡೆ ಬರಲು ತುಂಬಾ ಮುಜುಗರವಾಗುತ್ತಿತ್ತು ಎಂದಿದ್ದಾರೆ.

ಈಗ ಪಿಜಿಗೆ ಬೀಗ ಜಡಿದು ಸೀಜ್ ಮಾಡಲಾಗಿದೆ. ಈ ಕುರಿತು ಮಾತನಾಡಿದ ರೂಪಾ ಇನ್ನು ಅನಧಿಕೃತ ಪಿಜಿಗಳ ಮೇಲೆ ದಾಳಿ ನಿರಂತರ ನಡೆಯುತ್ತಲೇ ಇರಲಿದೆ ಎಂದಿದ್ದಾರೆ. ಒಟ್ಟಿನಲ್ಲಿ ನಾಯಿಕೊಡೆಗಳಂತೆ ಅನಧಿಕೃತವಾಗಿ   ಹುಟ್ಟಿಕೊಳ್ಳುತ್ತಿದ್ದ ಪಿಜಿಗಳಿಗಿನ್ನು ಬ್ರೇಕ್ ಬೀಳಲಿದೆ ಎಂಬುದು ಸಾಬೀತಾಗಿದೆ. (ಕೆ.ಎಸ್-ಎಸ್.ಎಚ್)

 

 

.

Leave a Reply

comments

Related Articles

error: