ಕರ್ನಾಟಕಪ್ರಮುಖ ಸುದ್ದಿ

ಸದ್ಯದಲ್ಲೇ ಕೇಳಬಹುದು “ಮಾನಸ ಗಂಗೋತ್ರಿ ಕಮ್ಯುನಿಟಿ ರೇಡಿಯೋ”

ಕಮ್ಯುನಿಟಿ ರೇಡಿಯೋ ಸ್ಟೇಷನ್ ಆರಂಭಿಸಲು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ವತಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಮೈಸೂರು ವಿಶ್ವವಿದ್ಯಾಲಯವು “ಮಾನಸ ಗಂಗೋತ್ರಿ ಕಮ್ಯುನಿಟಿ ರೇಡಿಯೋ ಸ್ಟೇಷನ್” ಆರಂಭಿಸಲಿದೆ.

ರೇಡಿಯೋ ಸ್ಟೇಷನ್ ಆರಂಭಿಸುವ ಕುರಿತು ಕೇಂದ್ರ ವಾರ್ತಾ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಲು ಮೈಸೂರು ವಿವಿ ನಿರ್ಧರಿಸಿದೆ. ಜೊತೆಗೆ ವಿವಿ ವತಿಯಿಂದ ಸಮಿತಿಯೊಂದನ್ನು ರಚಿಸಲಾಗಿದ್ದು, ರೇಡಿಯೋ ಸ್ಟೇಷನ್ ಆರಂಭ ಮತ್ತು ನಿರ್ವಹಣೆಯ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ.

ಮೈಸೂರು ವಿ.ವಿ.ಯ ಪ್ಲಾನಿಂಗ್, ಮಾನಿಟರಿಂಗ್ & ಇವಲೂಷನ್ ಬೋರ್ಡ್ ನಿರ್ದೇಶಕರಾದ ಲಿಂಗರಾಜ ಗಾಂಧಿಯವರು ಈ ಕುರಿತು ಮಾತನಾಡಿದ್ದು, ಕಮ್ಯುನಿಟಿ ರೇಡಿಯೋ ಸ್ಟೇಷನ್ ಆರಂಭಿಸಲು ಕೇಂದ್ರ ಸಚಿವಾಲಯವು 7.5 ಲಕ್ಷ ನೀಡಲಿದೆ. ರೇಡಿಯೋ ಸ್ಟೇಷನ್ ಆರಂಭ ಮತ್ತು ನಿರ್ವಹಣೆಗೆ ಇದಿಷ್ಟೇ ಮೊತ್ತ ಸಾಲದು. ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಬೇಕಾದರೆ ಇನ್ನಷ್ಟು ಪೂರಕ ನಿಧಿ ಅವಶ್ಯವಿದೆ ಎಂದು ಹೇಳಿದ್ದಾರೆ.

ಹೊಸ ರೇಡಿಯೋ ಸ್ಟೇಷನ್’ಗೆ ಕ್ಯಾಂಪಸ್’ನಲ್ಲಿರುವ ಇ.ಎಂ.ಎಂ.ಆರ್.ಸಿ ಕೇಂದ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುವುದು. ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಸಾಮಾಜಿಕ ಸೇವಾ ವಿಭಾಗದ ವಿದ್ಯಾರ್ಥಿಗಳು ರೇಡಿಯೋ ಕಾರ್ಯಕ್ರಮ ಪ್ರಸಾರಕ್ಕೆ ನೆರವಾಗಲಿದ್ದು, ಉಸ್ತುವಾರಿ ಸಮಿತಿ ಮಾರ್ಗದರ್ಶನ ನೀಡಲಿದೆ. ಸ್ಟೇಷನ್ ಆರಂಭದಲ್ಲಿ ಮಾನಸ ಗಂಗೋತ್ರಿ ಕೇಂದ್ರ ಬಿಂದುವಾಗಿ 15 ಕಿಲೋಮೀಟರ್ ವ್ಯಾಪ್ತಿಯ ವರೆಗೆ ರೇಡಿಯೋ ತರಂಗಗಳು ಬಿತ್ತರಗೊಳ್ಳಲಿವೆ.

ಪ್ರತಿನಿತ್ಯ ಕನಿಷ್ಠ 4 ಗಂಟೆಗಳ ಕಾಲ ವಿಧ್ಯಾರ್ಥಿಗಳಿಗಾಗಿ ರಚನಾತ್ಮಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಾಗಬೇಕು. ಉಪನ್ಯಾಸಕರು, ಅತಿಥಿಗಳ ಜೊತೆ ಸಂವಾದ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಾದರೆ ರೇಡಿಯೋ ಕೇಂದ್ರ ಸ್ಥಾಪನೆಯ ಉದ್ದೇಶಕ್ಕೆ ಯಸಸ್ಸು ದೊರೆತಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕೋಚಿಂಗ್ ಸೆಂಟರ್ :

ಸ್ಪರ್ಧಾತ್ಮಕ ಮತ್ತು ನಾಗರಿಕ ಸೇವಾ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೋಚಿಂಗ್ ಕೇಂದ್ರ ಆರಂಭಿಸಲು ಮೈಸೂರು ವಿಶ್ವವಿದ್ಯಾಲಯ ಆಲೋಚಿಸಿದೆ. ಕರ್ನಾಟಕ ಉನ್ನತ ಶಿಕ್ಷಣ ಮಂಡಳಿಗೆ ಈ ಬಗ್ಗೆ ಪ್ರವಾವನೆ ಸಲ್ಲಿಸಲಾಗಿದೆ ಎಂದರು. ಮಧ್ಯಮಾವಧಿ ಮತ್ತು ದೀರ್ಘಾವಧಿ ಕೋರ್ಸ್’ಗಳನ್ನು ನಡೆಸುವುದರ ಜೊತೆಗೆ ಸರ್ವ ಸೌಲಭ್ಯವುಳ್ಳ ಕೋಚಿಂಗ್ ಕೇಂದ್ರ ಆರಂಭಿಸಲಿದ್ದು, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಹಾಸ್ಟೆಲ್ ಸೌಲಭ್ಯವನ್ನೂ ಒದಗಿಸಲಾಗುವುದು.

ಆರಂಭಿಕ ಹಂತದಲ್ಲಿ ವಾರ್ಷಿಕ 500 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. ಜೊತೆಗೆ ಪ್ರತಿ ಮೂರು ತಿಂಗಳಿಗೆ ಒಂದರಂತೆ ವರ್ಷದಲ್ಲಿ ಒಟ್ಟು ನಾಲ್ಕು ಕೋರ್ಸ್ ಗಳನ್ನು ನಡೆಸುವ ಮೂಲಕ 200 ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಪ್ರತಿ ಬ್ಯಾಚ್’ನಲ್ಲಿ ಎಸ್.ಸಿ-ಎಸ್.ಟಿ, ಓಬಿಸಿ ವರ್ಗದ 10 ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ನೀಡಲಾಗುವುದು.

(CT)

Leave a Reply

comments

Related Articles

error: