ಕ್ರೀಡೆಪ್ರಮುಖ ಸುದ್ದಿ

ಮೂರನೇ ಟಿ-20 ಪಂದ್ಯ : ಟೀಂ ಇಂಡಿಯಾ ಮಣಿಸಿದ ಇಂಗ್ಲೆಂಡ್ ತಂಡ

ದೇಶ( ಅಹಮದಾಬಾದ್)ಮಾ.17:- ಇಂಗ್ಲೆಂಡ್ ಮೂರನೇ ಟಿ-20 ಪಂದ್ಯದಲ್ಲಿ ಸ್ಟಾರ್ ಆಟಗಾರ ಜೋಸ್ ಬಟ್ಲರ್(ಅಜೇಯ 83) ಹಾಗೂ ಜಾನಿ ಬೇರ್ ಸ್ಟೋ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 8 ವಿಕೆಟ್ ಗಳಿಂದ ವಿರಾಟ್ ಪಡೆಯನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಪೇರಿಸಿತ್ತು. ಸ್ಪರ್ಧಾತ್ಮಕ ಮೊತ್ತ ಹಿಂಬಾಲಿಸಿದ ಇಂಗ್ಲೆಂಡ್ 18.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 158 ರನ್ ಕಲೆ ಹಾಕಿ ಐದು ಪಂದ್ಯಗಳ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ.
ಟೀಮ್ ಇಂಡಿಯಾದ ಆರಂಭಿಕ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಹಾಗೂ ಕನ್ನಡಿಗ ರಾಹುಲ್ ಉತ್ತಮ ಜೊತೆಯಾಟವನ್ನು ನೀಡಲಿಲ್ಲ.

ರಾಹುಲ್ ಮೂರನೇ ಪಂದ್ಯದಲ್ಲೂ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಅಲ್ಲದೆ ಟೂರ್ನಿಯಲ್ಲಿ ಎರಡನೇ ಬಾರಿಗೆ ಸೊನ್ನೆಯಿಂದ ನಿರಾಸೆ ಅನುಭವಿಸಿದರು. ರೋಹಿತ್ ಶರ್ಮಾ 15 ರನ್ ಬಾರಿಸಿ ಮುನ್ನುಗುತ್ತಿದ್ದಾಗ ಮಾರ್ಕ್ ವುಡ್ ಎಸೆತಕ್ಕೆ ಶಾರ್ಟ್ ಫೈನ್ ಲೆಗ್ ನಲ್ಲಿ ಜೋಫ್ರಾಗೆ ಕ್ಯಾಚ್ ನೀಡಿದರು.

ಕೊನೆಯ ಐದು ಓವರ್ ಗಳಲ್ಲಿ ಟೀಮ್ ಇಂಡಿಯಾ ಆರ್ಭಟ ನಡೆಸಿತು. ಒಂದು ಹಂತದಲ್ಲಿ 29 ಎಸೆತಗಳಲ್ಲಿ 28 ರನ್ ಸಿಡಿಸಿದ್ದ ವಿರಾಟ್ ಬಳಿಕ ವಿರಾಟ ರೂಪ ತಾಳಿದರು. ಆರನೇ ವಿಕೆಟ್ ಗೆ ನಾಯಕ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ನೆರವಾಯಿತು. ಈ ಜೋಡಿ 35 ಎಸೆತಗಳಲ್ಲಿ 70 ರನ್ ಸೇರಿಸಿತು. ಪರಿಣಾಮ ಭಾರತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 156 ರನ್ ಪೇರಿಸಿತ್ತು. ಆದರೂ ಆಂಗ್ಲರ ವಿರುದ್ಧ ಹೀನಾಯ ಸೋಲು ಅನುಭವಿಸುವಂತಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: