Uncategorized

ಕೊರೊನಾ ಎರಡನೇ ಅಲೆ ತಡೆಗೆ ಕಠಿಣ ಕ್ರಮ ಕೈಗೊಳ್ಳಬೇಕು: ಮುಖ್ಯಮಂತ್ರಿಗಳಿಗೆ ಪ್ರಧಾನಿ ಮೋದಿ ಸೂಚನೆ

ನವದೆಹಲಿ,ಮಾ.17-ನಾವು ಕೊರೊನಾ ಎರಡನೇ ಅಲೆಯನ್ನು ತಕ್ಷಣವೇ ನಿಲ್ಲಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಮಾತನಾಡಿದ ಮೋದಿ ಅವರು, ನಾವು ಇದೀಗ ಈ ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಪ್ರಯತ್ನ ಪಡದಿದ್ದರೆ, ಕೊರೊನಾ ದೇಶದೆಲ್ಲೆಡೆ ಮತ್ತೆ ತನ್ನ ಕಬಂಧ ಬಾಹುವನ್ನು ಚಾಚಲಿದೆ. ನಾವು ಕೊರೊನಾ ಎರಡನೇ ಅಲೆಯನ್ನು ತಕ್ಷಣವೇ ನಿಲ್ಲಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಸೂಚಿಸಿದ್ದಾರೆ.

ಕಂಟೈನ್ ಮೆಂಟ್ ವಲಯ ಮತ್ತು ಹಲವು ನಿರ್ಬಂಧಗಳ ಜಾರಿ ಸೇರಿದಂತೆ ನಿರ್ಣಾಯಕ ಕ್ರಮಗಳೊಂದಿಗೆ ಕೋವಿಡ್ ನ ಎರಡನೇ ಅಲೆಯನ್ನು ತಡೆಟ್ಟಲು ರಾಜ್ಯಗಳಲ್ಲಿ ಪ್ರಮುಖ ಕ್ರಮಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ.

ಕೊರೊನಾ ಹೋರಾಟದಲ್ಲಿ ನಾವುಗಳಿಸಿದ ಆತ್ಮವಿಶ್ವಾಸವು ಅತಿಯಾದ ಆತ್ಮವಿಶ್ವಾಸಕ್ಕೆ ತಿರುಗಬಾರದು. ನಮ್ಮ ಯಶಸ್ಸು ಅಜಾಗರೂಕತೆಗೆ ಕಾರಣವಾಗಬಾರದು ಎಂದು ಎಚ್ಚರಿಕೆ ನೀಡಿದ ಪ್ರಧಾನಿ ಅವರು, ಜನರಲ್ಲಿ ಕೊರೊನಾ ಭೀತಿಯ ಸ್ಥಿತಿಯನ್ನು ಸೃಷ್ಟಿಸದೆ, ಅವರಲ್ಲಿ ಮುಂಜಾಗರುಕತೆಯನ್ನು ಮೂಡಿಸುವ ಅವಶ್ಯಕತೆಯಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳೊಂದಿಗಿನ ಸಂವಾದದ ಕೊನೆಯಲ್ಲಿ ಪಿಎಂ ಮೋದಿ ಅವರು ಕೊರೊನಾ ಲಸಿಕೆ ಬಗ್ಗೆ ಚರ್ಚಿಸಿದರು. ಪ್ರಸ್ತುತ, 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಇತರ ಕಾಯಿಲೆಗಳಿಗೆ ಲಸಿಕೆ ನೀಡಲಾಗುತ್ತಿದೆ ಎಂದರು.

19 ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ 10 ದಿನಗಳಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳನ್ನು ಹೊಂದಿರುವ ಭಾರತದ 19 ಜಿಲ್ಲೆಗಳಲ್ಲಿ 15 ಜಿಲ್ಲೆಗಳು ಮಹಾರಾಷ್ಟ್ರದವು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: