ಮೈಸೂರು

ಮಾ.20 : ವಿಶ್ವ ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಸೈಕಲ್ ಅಭಿಯಾನ

ಮೈಸೂರು,ಮಾ.18:-   ಪರಿಸರ ಸ್ನೇಹಿ ತಂಡ ಮತ್ತು ಕೆಎಂಪಿಕೆ ಟ್ರಸ್ಟ್ ವತಿಯಿಂದ ವಿಶ್ವ ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಸೈಕಲ್ ಅಭಿಯಾನವನ್ನು ಮಾ.20ರ ಬೆಳಿಗ್ಗೆ 7ರಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕುಕ್ಕರಹಳ್ಳಿ ಕೆರೆಯವರೆಗೆ ಹಮ್ಮಿಕೊಂಡಿದ್ದು ಬೇಸಿಗೆಯಲ್ಲಿ ಸಣ್ಣಪುಟ್ಟ ಪ್ರಾಣಿಪಕ್ಷಿಗಳನ್ನು ಬಿಸಿಲಿನ ತಾಪಮಾನದಿಂದ ಸಂರಕ್ಷಿಸಲು ಆಹಾರ ನೀರು ಒದಗಿಸುವಂತೆ ನಾಗರೀಕರಲ್ಲಿ ಪರಿಸರ ಸಂರಕ್ಷಣೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪರಿಸರ ಸೈಕಲ್ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್ ಭಿತ್ತಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿ  ಕೆಎಂಪಿಕೆ ಟ್ರಸ್ಟ್ ಮೈಸೂರಿನಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ರಸ್ತೆಬದಿಯಲ್ಲಿ ಮಲಗುವ ಅಶಕ್ತರು  ನಿರಾಶ್ರಿತರನ್ನು ಮಳೆ ಥಂಡಿ ಚಳಿಯಿಂದ ಕಾಪಾಡಲು ಆರೋಗ್ಯ ಕ್ಷೇಮದ ಸೇವಾಮನೋಭಾವ ಹಿತದೃಷ್ಟಿಯಿಂದ ಹೊದಿಕೆ ವಿತರಣೆ ಅಭಿಯಾನ ಮಾಡಿ ನೂರಾರು ಮಂದಿಗೆ ನೆರವಾಗಿತ್ತು,  ಅದರಂತೆಯೇ ಈಗ ಬೇಸಿಗೆ ಪ್ರಾರಂಭದಿಂದ ತಾಪಮಾನ ಹೆಚ್ಚಾಗುತ್ತಿದ್ದು ಮರಗಿಡಗಳಲ್ಲಿ ವಾಸಿಸುವ ಸಣ್ಣಪುಟ್ಟಪ್ರಾಣಿ ಪಕ್ಷಿಗಳ ಜೀವ ಉಳಿಸುವ ನಿಟ್ಟಿನಲ್ಲಿ ಮರಗಳಲ್ಲಿ ನೀರು ಮತ್ತು ಆಹಾರವನ್ನು ಒದಗಿಸುವ ಅಭಿಯಾನವನ್ನು ಪ್ರಾರಂಭಿಸಿದೆ, ನಿರಂತರವಾಗಿ ಹತ್ತು ದಿನಗಳು ನಡೆಯುವ ಅಭಿಯಾನದಲ್ಲಿ ಪರಿಸರ ಸಂರಕ್ಷಣಾ ಸಮಿತಿ ರಚಿಸಲಾಗಿದ್ದು ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಅಂಗಡಿಮುಂಗಟ್ಟುಗಳ ಪರಿಸರ ವ್ಯಾಪಾರಸ್ಥರು, ಉದ್ಯಾನಗಳಲ್ಲಿ ಹಿರಿಯ ನಾಗರೀಕರು ಮಹಿಳೆಯರ ಪರಿಸರ ಸಮಿತಿ, ಬಡಾವಣೆಗಳಲ್ಲಿ ಮನೆಗಳ ಮುಂದೆ ತಾರಸಿಯ ಮೇಲೆ ಆಹಾರ ನೀರು ಇಡಲು ಪರಿಸರಯುವಕರ ಸಮಿತಿ ರಚಿಸಲಾಗಿದೆ ಎಂದರು.

ಪರಿಸರ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳುವ ಆಸಕ್ತ ಸ್ವಯಂಸೇವಕರು 9880752727 ಮತ್ತು 8105078070 ಸಂಪರ್ಕಿಸಿ   ಉಚಿತವಾಗಿ ನೊಂದಾಯಿಸಿಕೊಳ್ಳಬಹುದು. ಕೋವಿಡ್ ನಿಯಂತ್ರಣಾ ಸರ್ಕಾರದ ನಿಯಾಮಾನುಸಾರ ಮಾಸ್ಕ್ ಕಡ್ಡಾಯವಾಗಿ ಹಾಕಿರಬೇಕು, ಹಸಿರು ಅಥವಾ ಬಿಳಿ ಟೀಶರ್ಟ್ ಧರಿಸಿ ಬರಬೇಕು, ಅಭಿಯಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಸೈಕಲ್ ಅಭಿಯಾನ ಮುಗಿದ ನಂತರ ಕೊನೆಯಲ್ಲಿ ಕುಕ್ಕರಹಳ್ಳಿ ಕೆರೆಯ ಬಳಿ  ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು.

ಪರಿಸರ ಕಾಳಜಿ ಸೆಲ್ಫಿ ಅಭಿಯಾನ

ಪರಿಸರ ಸಂರಕ್ಷಣೆಯ ಕಾಳಜಿಯಿಂದ ಸಣ್ಣಪುಟ್ಟಪ್ರಾಣಿಗಳ ಸಂರಕ್ಷಣೆಗೆ ಆಹಾರ ನೀರು ಒದಗಿಸಲು ನಾಗರೀಕರು ತಮ್ಮತಮ್ಮ ಮನೆಗಳ ತಾರಸಿಯ ಮೇಲೆ ಅಂಗಡಿಮುಂಗಟ್ಟುಗಳ ಮರಗಿಡಗಳ ಮುಂದೆ ಉದ್ಯಾನಗಳಲ್ಲಿ ಸ್ವಯಂಪ್ರೇರಿತರಾಗಿ ಮುಂದಾಗುವವರು  ಪೋಟೊಗಳನ್ನು 9880752727 ಮತ್ತು 8105078070 ಕಳುಹಿಸಿಕೊಡಬಹುದು, ಆಯ್ದ ಕ್ರಿಯಾತ್ಮಕ ಚಿತ್ರಗಳಿಗೆ ಪರಿಸರ ಕಾಳಜಿ ಪ್ರೋತ್ಸಾಹಕ ಪ್ರಮಾಣಪತ್ರ ನೀಡಲಾಗುವುದು ಎಂದರು.

ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾಗಲಿರುವ  ಪರಿಸರ ಜಾಗೃತಿ ಸೈಕಲ್ ಅಭಿಯಾನ ಜಯಚಾಮರಾಜೇಂದ್ರ ವೃತ್ತದ ಮಾರ್ಗವಾಗಿ ಚಾಮರಾಜ ಜೋಡಿ ರಸ್ತೆಯ ಮೂಲಕ ರಾಮಸ್ವಾಮಿ ವೃತ್ತ ಮಹರಾಜ ಕಾಲೇಜು ಮೈದಾನ ಮೂಲಕ ಸಾಗಿ ಕುಕ್ಕರಹಳ್ಳಿಕೆರೆ ತಲುಪಲಿದೆ.

ಪರಿಸರ ಜಾಗೃತಿ ಸೈಕಲ್ ಅಭಿಯಾನದಲ್ಲಿ ಮುಖ್ಯ ಅತಿಥಿಗಳಾಗಿ ಡಿಸಿಪಿ  ಪ್ರಕಾಶ್ ಗೌಡ,  ರಂಗಭೂಮಿ ಕಲಾವಿದ ಹಾಗೂ ಚಿತ್ರನಟ ಮಂಡ್ಯ ರಮೇಶ್, ಸುಯೋಗ್ ಆಸ್ಪತ್ರೆ ವ್ಯವಸ್ಥಾಪಕರಾದ ಡಾ.ಎಸ್ ಪಿ ಯೋಗಣ್ಣ , ಅಂಬಾರಿ ಕನ್ವೆನ್ಷನ್ ಹಾಲ್ ಮಾಲೀಕರಾದ ಸ್ವೀಟ್ ಮಹೇಶ್, ಪರಿಸರ ಶಿಕ್ಷಣ ತಜ್ಞರಾದ ಸಪ್ತ ಗಿರೀಶ್, ಕರ್ನಾಟಕ ರಾಜ್ಯ ವನ್ಯಜೀವಿ ಸಂಸ್ಥೆಯ ಸದಸ್ಯರಾದ ಜಿ ಮಲ್ಲೇಶಪ್ಪ ,  ಮೈಸೂರು ನಗರ ವನ್ಯಜೀವಿ ಸಂಸ್ಥೆಯ ಡಾ.ಸಂತೃಪ್ತ್ , ಉರಗ ತಜ್ಞರಾದ ಸ್ನೇಕ್ ಶ್ಯಾಮ್, ಬಂಡೀಪುರ ಅರಣ್ಯ ವನ್ಯಜೀವಿ ಮುಖಂಡರಾದ ಎನ್ ಎಮ್ ನವೀನ್ ಕುಮಾರ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ್ ಗೌಡ, ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಎಲ್ ಆರ್  ಮಹದೇವ ಸ್ವಾಮಿ, ನಗರ ಪಾಲಿಕಾ ಸದಸ್ಯರಾದ ಕೆ ವಿ ಶ್ರೀಧರ್, ಸಮಾಜಸೇವಕರಾದ ಕೆ.ರಘುರಾಮ್ ವಾಜಪೇಯಿ, ಡಿಟಿಎಸ್ ಫೌಂಡೇಶನ್ ಡಿ.ಟಿ. ಪ್ರಕಾಶ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ  ಪರಿಸರ ಪ್ರೇಮಿ ಯುವಮುಖಂಡರಾದ ಎನ್ ಎಮ್ ನವೀನ್ ಕುಮಾರ್,  ಜೀವಧಾರ ರಕ್ತನಿಧಿ ಕೇಂದ್ರದ ಎಸ್.ಇ ಗಿರೀಶ್,   ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: