ದೇಶಪ್ರಮುಖ ಸುದ್ದಿ

ಯುವತಿಯರು `ಹರಿದ ಜೀನ್ಸ್’ ಧರಿಸುವುದು ಇದ್ಯಾವ ಸಂಸ್ಕೃತಿ: ಉತ್ತರಾಖಂಡ ಸಿಎಂ ತೀರಥ್‌ ಸಿಂಗ್‌ ರಾವತ್‌

ಡೆಹ್ರಾಡೂನ್‌,ಮಾ.18-ಯುವತಿಯರು ಹರಿದ ಜೀನ್ಸ್‌ ಧರಿಸುತ್ತಿದ್ದಾರೆ. ಇದ್ಯಾವ ಸಂಸ್ಕೃತಿ ಎಂದು ಉತ್ತರಾಖಂಡದ ನೂತನ ಮುಖ್ಯಮಂತ್ರಿ ತೀರಥ್‌ ಸಿಂಗ್‌ ರಾವತ್‌ ಪ್ರಶ್ನಿಸಿದ್ದಾರೆ.

ಉತ್ತರಾಖಂಡ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಡೆಹ್ರಾಡೂನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಾನು ಒಂದು ದಿನ ಜೈಪುರದಿಂದ ಡೆಹ್ರಾಡೂನ್‌ಗೆ ವಿಮಾನದಲ್ಲಿ ಬರುತ್ತಿದ್ದ ವೇಳೆ ನಮ್ಮ ಸೀಟಿನ ಬಳಿ ಆಸೀನರಾಗಿದ್ದ ಮಹಿಳೆಯೊಬ್ಬರು ಹರಿದ ಜೀನ್ಸ್‌ ಧರಿಸಿದ್ದರು. ಎನ್‌ಜಿಒವೊಂದರಲ್ಲಿ ಕೆಲಸ ಮಾಡುತ್ತಿದ್ದ ಆ ಮಹಿಳೆಯ ಜತೆಗೆ ಮಕ್ಕಳೂ ಇದ್ದರು. ಇಂತಹ ‘ಹರಿದ ಸಂಸ್ಕೃತಿ’ಯು ಮಕ್ಕಳಿಗೆ ಯಾವ ಸಂದೇಶ ರವಾನಿಸುತ್ತದೆ? ಎಂದು ಪ್ರಶ್ನಿಸಿದ್ದಾರೆ.

ಪಾಶ್ಚಿಮಾತ್ಯರು ಭಾರತದ ಸಿರಿವಂತ ಸಂಪ್ರದಾಯದತ್ತ ಮರಳುತ್ತಿದ್ದರೆ, ನಾವು ಮಾತ್ರ ಅವರ ಸಂಸ್ಕೃತಿಯತ್ತ ಹೊರಳುತ್ತಿದ್ದೇವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದಿದ್ದಾರೆ.

ತೀರಥ್‌ ಸಿಂಗ್‌ ರಾವತ್‌ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದು, ಇಂತಹ ಹೇಳಿಕೆಗಳು ಸಲ್ಲದು ಎಂದಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: