
Uncategorized
ದೀದಿಯ ಆಟ ಅಂತ್ಯವಾಗಿ, ಬಿಜೆಪಿಯ ಅಭಿವೃದ್ಧಿಯ ಆಟ ಆರಂಭ: ಪ್ರಧಾನಿ ಮೋದಿ
ಕೋಲ್ಕತ್ತಾ,ಮಾ.18-ಮಮತಾ ದೀದಿಯ ಅಧಿಕಾರದ ಆಟ ಅಂತ್ಯವಾಗಲಿದೆ. ಬಿಜೆಪಿಯ ಅಭಿವೃದ್ದಿಯ ಆಟ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪುರ್ಲಿಯಾದಲ್ಲಿಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಮತಾ ದೀದಿ ಖೇಲ್ ಹುಬೆ(ಆಟ ಶುರು) ಅನ್ನುತ್ತಿದ್ದಾರೆ. ಆದರೆ ಮಮತಾ ದೀದಿಯ ಅಧಿಕಾರದ ಆಟ ಅಂತ್ಯವಾಗಲಿದೆ. ಬಿಜೆಪಿಯ ಅಭಿವೃದ್ದಿಯ ಆಟ ಆರಂಭವಾಗಲಿದೆ ಎಂದು ಟಾಂಗ್ ಕೊಟ್ಟರು.
ಮಮತಾ ದೀದಿ ಖೇಲ್ ಹುಬೆ ಅಂದರೆ ಬಿಜೆಪಿ ಉದ್ಯೋಗ, ಶಿಕ್ಷಣ, ಅಭಿವೃದ್ಧಿ, ಮಹಿಳೆಯರ ಕಲ್ಯಾಣ, ಪ್ರತೀ ಮನೆಗೆ ಶುದ್ಧ ನೀರು ಎಂದು ಹೇಳುತ್ತದೆ. ದಲಿತರು, ಆದಿವಾಸಿಗಳು ಮತ್ತಿತರ ಹಿಂದುಳಿದ ಸಮುದಾಯಗಳಿಗೆ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಕಾರ್ಯೋನ್ಮುಖವಾಗಲಿದೆ ಎಂದರು.
ಟಿಎಂಸಿ ಸರ್ಕಾರ ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ನೀರಾವರಿ ಯೋಜನೆಯಂತಹ ಕಾರ್ಯಗಳನ್ನು ಕೈಗೊಂಡಿಲ್ಲ. ನೀರಿನ ಕೊರತೆಯಿಂದಾಗಿ ಜನತೆ ಅನುಭವಿಸುತ್ತಿರುವ ಸಂಕಷ್ಟಗಳು ನನಗೆ ಗೊತ್ತಿದೆ. ಟಿಎಂಸಿ ಸರ್ಕಾರ ಕೃಷಿಯನ್ನು ಬಿಟ್ಟು, ತನ್ನ ಸ್ವಂತ ಆಟದಲ್ಲಿ ಬ್ಯುಸಿಯಾಗಿದೆ. ಜನರ ಅಶೋತ್ತರಗಳಿಗೆ ಮಣೆ ಹಾಕಿಲ್ಲ. ದುರ್ಗಾ ಮಾತೆಯ ಆಶೀರ್ವಾದದಿಂದಲೇ ನೀವು ಸೋಲುತ್ತೀರಿ ಎಂದು ಪ್ರಧಾನಿ ಮೋದಿ ಭವಿಷ್ಯ ನುಡಿದರು.
ಮೇ. 2 ರಂದು ಮಮತಾ ದೀದಿ ಮನೆಗೆ ತೆರಳಲಿದ್ದು, ಬಿಜೆಪಿಯ ಅಭಿವೃದ್ಧಿಯ ಶಕೆ ಆರಂಭವಾಗಲಿದೆ. ನಮಗೆ ಯಾವುದೇ ಭಯವಿಲ್ಲ ಎಂದು ಪ್ರಧಾನಿ ಬಿಜೆಪಿ ಕಾರ್ಯಕರ್ತರ ವಿಶ್ವಾಸ ಇಮ್ಮಡಿಗೊಳಿಸಿದರು.
ಇನ್ನು ಇದೇ ಮೊದಲ ಬಾರಿಗೆ ಮಮತಾ ಬ್ಯಾನರ್ಜಿಯ ಕಾಲು ಮುರಿತಕ್ಕೆ ಸಂಬಂಧಪಟ್ಟಂತೆ ಹೇಳಿಕೆ ನೀಡಿದ ಪ್ರಧಾನಿ ಮೋದಿ, ಯಾವಾಗ ದೀದಿಗೆ ಗಾಯವಾಯ್ತು? ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಹಾರೈಸಿದರು. (ಏಜೆನ್ಸೀಸ್, ಎಂ.ಎನ್)