ಕರ್ನಾಟಕಪ್ರಮುಖ ಸುದ್ದಿ

ಕೋವಿಡ್ ಕೆಲಸ ಮಾಡುವವರಿಗೆ 50 ದಿನ ರಜೆ ಇಲ್ಲ: ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು,ಮಾ.18-ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗುತ್ತಿದೆ. ಎಲ್ಲರೂ ಸೇರಿ ಸೋಂಕು ನಿಯಂತ್ರಿಸಬೇಕಿದೆ. ಹೀಗಾಗಿ ಇಂದಿನಿಂದ 50 ದಿನಗಳವರಗೆ ಸಚಿವರು ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ಕೋವಿಡ್ ಕೆಲಸ ಮಾಡುವವರಿಗೆ ರಜೆ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಎರಡನೇ ಹಂತದ ಮುನ್ಸೂಚನೆ ಇರುವ ಹಿನ್ನೆಲೆ ಆರೋಗ್ಯ ಇಲಾಖೆ, ಮುಖ್ಯ ಆಸ್ಪತ್ರೆ ವೈದ್ಯರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ನಿರ್ದಿಷ್ಟ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.

ನಮ್ಮ ರಾಜ್ಯವನ್ನು ಕೋವಿಡ್ ಮುಕ್ತ ರಾಜ್ಯ ಮಾಡೋಣ ಎಂದ ಅವರು, ಕೋವಿಡ್ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸಾವಿರ ಹಾಸಿಗೆ ಮೀಸಲಿಡಲಾಗುವುದು. ಪ್ರತೀ ವಾರ್ಡಿಗೆ ಆಂಬ್ಯುಲೆನ್ಸ್ ನೀಡಲಾಗುತ್ತಿದೆ. ಬೆಂಗಳೂರಿಗೆ 200 ಆಂಬ್ಯುಲೆನ್ಸ್ ನೇಮಕ ಮಾಡಲಾಗಿದೆ. ಪೂರ್ವ ಸಿದ್ಧತೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಜವಾಬ್ದಾರಿ ನೀಡಲಾಗಿದೆ. ಗೃಹ ಇಲಾಖೆ, ವೈದ್ಯರು ಸೇರಿದಂತೆ ಹಿಂದೆ ತೆಗೆದುಕೊಂಡಿದ್ದ ಕ್ರಮ ಮತ್ತೆ ತೆಗೆದುಕೊಳ್ಳಲಾಗಿದೆ. ಹಿಂದಿನಂತೆ ಕೋವಿಡ್ ವಾರ್ ರೂಮ್ ನಡೆಸಲಾಗುವುದು ಎಂದು ಹೇಳಿದರು.

ವ್ಯಾಕ್ಸಿನ್ ಕೊಡುವ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. 60 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಸ್ವಯಂ ಪ್ರೇರಿತರಾಗಿ ಬರಬೇಕು. ಜನರು ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಹಾಕಿಸಿಕೊಂಡ ಬಳಿಕ ಸೋಂಕು ಬರುವುದಿಲ್ಲ ಎಂದು ಮಾಸ್ಕ್ ಮರೆಯಬಾರದು. ಕಡ್ಡಾಯವಾಗಿ ಮಾಸ್ಕ್ ಬಳಸಬೇಕು. ಜನರು ಗುಂಪು ಸೇರಬಾರದು ಎಂದು ಸೂಚನೆ ನೀಡಿದರು.

ಇದೇ ವಾರದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆ ಮಾಲೀಕರ ಜೊತೆ ಮಾತುಕತೆ ಮಾಡಲಾಗುವುದು. ಮುಂದೆ ಮತ್ತೆ ಎರಡನೇ ಅಲೆಯಲ್ಲಿ ಸೋಂಕು ಹೆಚ್ಚಾದರೆ ಬೆಡ್ ಮೀಸಲಿಡಲು ಸೂಚನೆ ನೀಡಲಾಗುವುದು. ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಕೂಡ ಸಭೆ ಮಾಡಲಾಗಿದೆ. ಕಂದಾಯ ಇಲಾಖೆಯವರನ್ನೂ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಆ್ಯಪ್ ಬಳಕೆಯನ್ನು ಮುಂದುವರೆಸುತ್ತೇವೆ. ತಾಂತ್ರಿಕ ಸೌಲಭ್ಯ ಬಳಕೆ ಮಾಡಲಾಗುವುದು. ಪಾರದರ್ಶಕವಾಗಿರಲು ರಿಯಲ್ ಟೈಮ್ ಬಳಸಲಾಗುವುದು. ಯಾವುದರಲ್ಲಾದರೂ ಲೋಪ ಕಂಡು ಬಂದರೆ, ಆಯಾ ಇಲಾಖೆ ಮುಖ್ಯಸ್ಥರನ್ನೇ ಹೊಣೆ ಮಾಡಲಾಗುವುದು ಎಂದರು. (ಎಂ.ಎನ್)

Leave a Reply

comments

Related Articles

error: