
ಕರ್ನಾಟಕಪ್ರಮುಖ ಸುದ್ದಿ
ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ನೈಜಿರಿಯಾ ಪ್ರಜೆ ಸೇರಿದಂತೆ ಇಬ್ಬರ ಬಂಧನ
ರಾಜ್ಯ(ಬೆಂಗಳೂರು)ಮಾ.20:- ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಒಬ್ಬ ನೈಜೀರಿಯಾ ಪ್ರಜೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಕಮರ್ಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತರನ್ನು ಟಿ.ಸಿ.ಪಾಳ್ಯದಲ್ಲಿ ವಾಸವಿದ್ದ ನೈಜೀರಿಯಾ ಮೂಲದ ಒಕೊರೊ ಕ್ರಿಶ್ಚಿಯನ್ ಇಫೀನ್ಯಿ (36) ಹಾಗೂ ಸನ್ ಶೈನ್ ಬಡಾವಣೆ ನಿವಾಸಿ ರೋಹಿತ್ ಕ್ರಿಸ್ಟೋಫರ್ (28) ಎಂದು ಗುರುತಿಸಲಾಗಿದೆ.
2018ರಲ್ಲಿ ಮೂರು ತಿಂಗಳ ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಆರೋಪಿ ಒಕೊರೊ ಕ್ರಿಶ್ಚಿಯನ್ವೀ ಸಾ ಮುಗಿದಿದ್ದರೂ ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ. ಸುಲಭವಾಗಿ ಹಣ ಮಾಡಬೇಕೆಂಬ ಉದ್ದೇಶದಿಂದ ಕೊರಿಯರ್ ಮೂಲಕ ಎಂಡಿಎಂಎ ಮಾದಕ ವಸ್ತು ತರಿಸಿಕೊಂಡು, ನಗರದ ವಿವಿಧ ಭಾಗದ ಜನರಿಗೆ ಮಾರಾಟ ಮಾಡುತ್ತಿದ್ದ. ಆನ್ ಲೈನ್ ಪಾವತಿಯ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟಿ.ಸಿ.ಪಾಳ್ಯದ ಬೆಂಗಳೂರು ಶೂಟರ್ಸ್ ಹೆಸರಿನ ಫುಟ್ಬಾಲ್ ಅಕಾಡೆಮಿಗೆ ಆಟವಾಡಲು ಹೋಗುತ್ತಿದ್ದಾಗ ಅಲ್ಲಿ ಕೆಲಸ ಮಾಡುತ್ತಿದ್ದ ರೋಹಿತ್ ಕ್ರಿಸ್ಟೋಫರ್ನ ಪರಿಚಯವಾಗಿತ್ತು. ಈತನ ಮುಖಾಂತರ ಕೆ.ಆರ್.ಪುರ, ರಾಮಮೂರ್ತಿನಗರ ಸೇರಿದಂತೆ ವಿವಿಧೆಡೆ ನೆಲೆಸಿರುವ ಆಫ್ರಿಕಾ ಮೂಲದ ವ್ಯಕ್ತಿಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಪೂರೈಸುವ ದಂಧೆಯಲ್ಲಿ ತೊಡಗಿದ್ದ. ಆರೋಪಿಗಳಿಂದ 35.20 ಲಕ್ಷ ರೂ.ಬೆಲೆಬಾಳುವ 350 ಗ್ರಾಂ ತೂಕದ ಎಂಡಿಎಂಎ (ಮಾದಕ ವಸ್ತು), ಎರಡು ಮೊಬೈಲ್, 10 ಜಿಪ್ ಲಾಕ್ ಕವರ್, ಒಂದು ಸ್ಕೂಟರ್ ಹಾಗೂ ದಾಖಲೆಗಳನ್ನು ಜಪ್ತಿ ಮಾಡಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.