ಮೈಸೂರು

ಸೂಕ್ಷವಾದ, ಸಂವೇದನಾಶೀಲವಾದ ಗುಣ ಪರಿಸರದ ಮೂಲಕ ಸಿಗಲು ಸಾಧ್ಯ, ಪ್ರಕೃತಿಗೆ ಪರ್ಯಾಯವಿಲ್ಲ : ಮಂಡ್ಯ ರಮೇಶ್ ಅಭಿಮತ

ಮೈಸೂರು,ಮಾ.20 : – ಸೂಕ್ಷವಾದ, ಸಂವೇದನಾಶೀಲವಾದ ಗುಣ ಪರಿಸರದ ಮೂಲಕವಷ್ಟೇ ಸಿಗಲು ಸಾಧ್ಯ. ಪ್ರಪಂಚದಲ್ಲಿ ಪರ್ಯಾಯವೇ ಇಲ್ಲದಂತಹ ಒಂದು ವಿಷಯ ಏನಾದರೂ ಇದ್ದರೆ ಪ್ರಕೃತಿ ಮಾತ್ರ.  ಪ್ರಕೃತಿಗೆ ಮಾತ್ರ ಪರ್ಯಾಯವಿಲ್ಲ ಎಂದು ರಂಗಭೂಮಿ ಕಲಾವಿದ, ನಟ ಮಂಡ್ಯ ರಮೇಶ್ ಅಭಿಪ್ರಾಯಪಟ್ಟರು.

ಅವರಿಂದು ಪರಿಸರ ಸ್ನೇಹಿ ತಂಡ ಮತ್ತು ಕೆಎಂಪಿಕೆ ಟ್ರಸ್ಟ್ ವತಿಯಿಂದ ವಿಶ್ವ ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಸೈಕಲ್ ಅಭಿಯಾನವನ್ನು  ಕೋಟೆ ಆಂಜನೇಯ ದೇವಸ್ಥಾನದಿಂದ ಕುಕ್ಕರಹಳ್ಳಿ ಕೆರೆವರೆಗೆ ಹಮ್ಮಿಕೊಳ್ಳಲಾಗಿದ್ದು, ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.   ಮೋಟಾರನ್ನು ಅಳವಡಿಸದೆ, ದೊಡ್ಡ ದೊಡ್ಡ ಯಂತ್ರಗಳನ್ನು ಹಾಕದೆ ಅದರಿಂದ  ಯಾವ ಹೊಗೆನೂ ಬರದೇ ಹೋಗುತ್ತಿರುತ್ತೇವೆ. ಅದರಿಂದ ಯಾವ ಅಪಾಯವೂ ಇಲ್ಲ ಎನ್ನುವ ಸಂಕೇತ, ಇದೊಂದು ಸಾಂಕೇತಿಕ ಅಭಿಯಾನ. ನೂರಾರು ಬೈಕ್ , ಕಾರುಗಳಲ್ಲಿ ಹೋದರೆ ಪಕ್ಷಿ ಸಂಕುಲಕ್ಕೆ ತೊಂದರೆ ಆಗತ್ತೆ. ನೂರಾರು ಪ್ರಾಣಿ ಪಕ್ಷಿ ಸಂಕುಲಕ್ಕೆ ಮನುಷ್ಯ ಸಂಕುಲಕ್ಕೂ ತೊಂದರೆ ಆಗತ್ತೆ. ಅದನ್ನು ಬಗೆಹರಿಸಲು ಈ ರೀತಿ ಮಾಡಲಾಗಿದೆ ಎಂದರು.

ಇದೊಂದು ಸರಳವಾದ ತುಂಬಾ ಸುಂದರವಾದ ರೂಪಕ. ಗುಬ್ಬಚ್ಚಿ ಹಾರಿ ಬಂದು ಕೂತಾಗ ಒಂದು ಮಗು ಕುಳಿತಂತಹ ಅನುಭವವವಾಗತ್ತೆ. ಒಂದು ಸಲ ಅದು ಮನುಷ್ಯನ ಸ್ಪರ್ಶ ಮಾಡಿದರೆ ಅವರ ಕಡೆಯವರು ಮತ್ತೆ ಸೇರಿಸಿಕೊಳ್ಳಲ್ಲ ಎನ್ನುವ ಮಾತಿದೆ, ಅಷ್ಟು ಸೂಕ್ಷ್ಮವಾದ ಪಕ್ಷಿ. ಸೂಕ್ಷವಾದ, ಸಂವೇದನಾಶೀಲವಾದ ಗುಣ ಪರಿಸರದ ಮೂಲಕ ಸಿಗಲು ಸಾಧ್ಯ. ಪ್ರಪಂಚದಲ್ಲಿ ಪರ್ಯಾಯವೇ ಇಲ್ಲದಂತಹ ಒಂದು ವಿಷಯ ಏನಾದರೂ ಇದ್ದರೆ ಪ್ರಕೃತಿ ಮಾತ್ರ.   ಪ್ರಕೃತಿಗೆ ಮಾತ್ರ ಪರ್ಯಾಯವಿಲ್ಲ, ಅದು ಕೋಪಗೊಂಡರೆ ಏನುಬೇಕಾದರೂ ಆಗಬಹುದು, ಅದು ತನ್ನ ಕಾರ್ಯ ನಿಲ್ಲಿಸಿದರೆ ಏನು ಬೇಕಾದರೂ ಆಗಬಹುದು. ಶಾಂತಗೊಂಡರೆ ಎಷ್ಟು ಒಳ್ಳೆಯದಾಗಲಿದೆ ಎಂಬುದು ಗೊತ್ತಿದೆ. ಹಾಗೇ ಪ್ರಕೃತಿಯನ್ನು ಶಾಂತಗೊಳಿಸಬೇಕು ಎನ್ನುವ ಸುಂದರ ರೂಪಕಕ್ಕೆ ಚಾಲನೆ ನೀಡಬೇಕೆಂದು ಇಂದು ಟ್ರಸ್ಟ್ ನವರು ಎಲ್ಲಾ ಪರಿಸರ ಸ್ನೇಹಿ ಗೆಳೆಯರು ಸೇರಿದ್ದಾರೆ. ಧರ್ಮ, ಪಂಥ, ಪಕ್ಷ ಎಲ್ಲವನ್ನು ಬದಿಗೊತ್ತಿ, ಸುಂದರವಾದ ಮೈಸೂರನ್ನು ಚೆನ್ನಾಗಿರುವ ಪರಿಸರವನ್ನು ಉಳಿಸಿಕೊಳ್ಳಬೇಕು, ಇಲ್ಲಿರುವ ಪ್ರಾಣಿಪಕ್ಷಿಗಳನ್ನು ಮತ್ತೆ ಸಲಹಬೇಕು. ಅವೆಲ್ಲವೂ ನಮ್ಮ ಜೊತೆ ಇರಬೇಕು. ಇಷ್ಟೊಂದು ಜನ ಇದ್ದರೂ ಸಹ ಪಕ್ಷಿಗಳು ಹಾರಾಡೋ ಕಡೆನೇ ನಮ್ಮ ಗಮನ ಹೋಗತ್ತೆ. ಯಾಕೆಂದರೆ ಅದಕ್ಕೊಂದು ಶಕ್ತಿ ಇದೆ. ಅದು ಹಾರತ್ತೆ. ನಮ್ಮ ಮನಸ್ಸು ಕೂಡ ಕಲ್ಪನಾತೀತವಾಗಿ ಎಲ್ಲೆಲ್ಲೋ ಹಾರತ್ತಾ ಇರತ್ತಲ್ಲ. ಅದು ಸಂತೋಷದ ಸಂಗತಿ ಎಂದು ತಿಳಿಸಿದರು.

ಪ್ರಕೃತಿ ಕೊಡೋ ಸಂತೋಷಕ್ಕೆ ಈ ಪ್ರಪಂಚದಲ್ಲಿ ಪರ್ಯಾಯವೇ ಇಲ್ಲ. ಹಾಗಾಗಿ ಅದನ್ನು ಮತ್ತೆ ಉಳಿಸಬೇಕು ಅಂತಾದರೆ ಅಣುರೇಣುತೃಣಕಾಷ್ಠಗಳನ್ನು ಬಹಳ ಸೂಕ್ಷ್ಮವಾಗಿ ಸಂರಕ್ಷಿಸಿಕೊಳ್ಳಬೇಕು. ಇದು ನಮ್ಮದು ಎನ್ನುವ ಗುಣ ಬರುವುದರಿಂದ ಈ ದೇಶದ ಭವಿಷ್ಯ ನಿರ್ಮಾಣವಾಗತ್ತೆ. ಎಳೆಯ ತಲೆಮಾರಿನ ಮೇಲೂ ಪರಿಣಾಮ ಬೀರತ್ತೆ. ಪುಟಾಣಿ ಮಕ್ಕಳಿಂದ ಕಲಾವಿದರು, ವೈದ್ಯರು, ರಾಜಕೀಯದವರು ಎಲ್ಲರಂಗದವರೂ ಸೈಕಲ್ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ನಾವೆಲ್ಲ ಒಂದು  ಎಂಬ ಭಾವನೆ ತೋರಿಸಿ ನೀರಿಗೆ ಎಷ್ಟೇ ತೊಂದರೆ ಇದ್ದರೂ ಒಂದು ಬಟ್ಟಲಲ್ಲಿ   ಪಕ್ಷಿಗಳಿಗೆ ಒಂದಷ್ಟು ನೀರನ್ನೋ, ಅಕ್ಕಿಯನ್ನೋ ಬೆಳೆಕಾಳುಗಳನ್ನೋ ತೆಗೆದಿಡಿ, ದ್ವಿದಳ ಧಾನ್ಯಗಳನ್ನು ತೆಗೆದಿಡಿ, ಅದನ್ನು ತಿನ್ನಲು ಬರುವ ಪಕ್ಷಿಗಳು ನಿಮ್ಮ ಮನೆಯ ಸುತ್ತ ಹಾರಾಡುವ ಮೂಲಕ ನಿಮ್ಮ ಮಗುವಿಗೆ, ನಿಮ್ಮ ಮಕ್ಕಳಿಗೆ, ಹಿರಿಯರಿಗೆ    ದೊಡ್ಡ ಸಮಾಧಾನ ನೀಡತ್ತೆ. ಹನಿ ನೀರನ್ನು ಕಾಳನ್ನು ಇಡುವ ಮೂಲಕ ಎಷ್ಟೋ ಸಮಾಧಾನ ಸಿಗತ್ತೆ. ಬಹಳ ದೊಡ್ಡ ದಾನ ಧರ್ಮ ಮಾಡಲು ಸಾಧ್ಯವಾಗದಿದ್ದರೂ ಪುಟ್ಟ ಸೇವೆಯನ್ನು ಮಾಡಿ ಎಂದು ಕರೆ ನೀಡಿದರು.

ಸೈಕಲ್ ನಲ್ಲಿ ಹೋಗುವ ಮೂಲಕ ಬೃಹತ್ ಪರಿಸರ ನಾಶವಾಗುತ್ತಿರುವುದನ್ನು ತಪ್ಪಿಸುವುದಕ್ಕೋಸ್ಕರ ದೊಡ್ಡ ಸಾಂಕೇತಿಕವಾದ ಅಭಿಯಾನವಾಗತ್ತೆ. ಪ್ರಾಣಿ,ಪಕ್ಷಿ, ಪರಿಸರಗಳನ್ನು ಉಳಿಸುವ ಮೂಲಕ ನೀವು ಉಳಿಯಿರಿ, ಇದನ್ನು ಮುಂದಿನ ತಲೆಮಾರಿಗೂ ಹೇಳಿಕೊಡಿ. ಪರಿಸರವನ್ನು ಸಂರಕ್ಷಿಸುವ ಸಂಸ್ಕಾರವನ್ನು ನೀವು ಮಕ್ಕಳಿಗೆ ಕಲಿಸದಿದ್ದಲ್ಲಿ ಏನು ಮಾಡಿದರೂ ಪ್ರಯೋಜನವಿಲ್ಲ. ಈ ಅಭಿಯಾನ ವರ್ಷವಿಡೀ ಬೇರೇ ಬೇರೆ ರೂಪದಲ್ಲಿ ಕಾಣಿಸಿಕೊಳ್ಳುತ್ತಿರಬೇಕು. ಹುಲಿ ಸಿಂಹ ಬರುವುದಕ್ಕಿಂತ ಗುಬ್ಬಚ್ಚಿ ಬರುವುದು ಒಳ್ಳೆಯದಲ್ಲವೇ? ಅವರಿರುವ  ಪರಿಸರವನ್ನು ಕಿತ್ತುಕೊಂಡದ್ದಕ್ಕೆ ಅವು ನಮ್ಮ ಮನೆಗಳಿಗೆ ಬರುವುದಲ್ಲವೇನ್ರಿ ಎಂದು ಪ್ರಶ್ನಿಸಿದರು.

ಈ ಸಂದರ್ಭಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ, ಗೀತಾ ಮೊಂಟಡ್ಕ, ಸುಯೋಗ್ ಆಸ್ಪತ್ರೆ ವ್ಯವಸ್ಥಾಪಕರಾದ ಡಾ.ಎಸ್ ಪಿ ಯೋಗಣ್ಣ , ಅಂಬಾರಿ ಕನ್ವೆನ್ಷನ್ ಹಾಲ್ ಮಾಲೀಕರಾದ ಸ್ವೀಟ್ ಮಹೇಶ್, ಪರಿಸರ ಶಿಕ್ಷಣ ತಜ್ಞರಾದ ಸಪ್ತ ಗಿರೀಶ್, ಕರ್ನಾಟಕ ರಾಜ್ಯ ವನ್ಯಜೀವಿ ಸಂಸ್ಥೆಯ ಸದಸ್ಯರಾದ ಜಿ ಮಲ್ಲೇಶಪ್ಪ ,  ಮೈಸೂರು ನಗರ ವನ್ಯಜೀವಿ ಸಂಸ್ಥೆಯ ಡಾ.ಸಂತೃಪ್ತ್ , ಉರಗ ತಜ್ಞರಾದ ಸ್ನೇಕ್ ಶ್ಯಾಮ್, ಬಂಡೀಪುರ ಅರಣ್ಯ ವನ್ಯಜೀವಿ ಮುಖಂಡರಾದ ಎನ್ ಎಮ್ ನವೀನ್ ಕುಮಾರ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ್ ಗೌಡ, ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಎಲ್ ಆರ್  ಮಹದೇವ ಸ್ವಾಮಿ, ನಗರ ಪಾಲಿಕಾ ಸದಸ್ಯರಾದ ಕೆ ವಿ ಶ್ರೀಧರ್, ಸಮಾಜಸೇವಕರಾದ ಕೆ.ರಘುರಾಮ್ ವಾಜಪೇಯಿ, ಡಿಟಿಎಸ್ ಫೌಂಡೇಶನ್ ಡಿ.ಟಿ. ಪ್ರಕಾಶ್ , ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

comments

Related Articles

error: